ಹಾಲಸ್ವಾಮಿ ಮಠದಲ್ಲಿ ಕಾರ್ತಿಕ ಸಂಭ್ರಮ

ಹಗರಿಬೊಮ್ಮನಹಳ್ಳಿ.ಡಿ.೨೫ ವೀರಶೈವ ಧರ್ಮದಲ್ಲಿ ಪ್ರತಿಯೊಬ್ಬರೂ ಸಂಸ್ಕಾರಕ್ಕೆ ಒಳಗಾಗುವ ಮೂಲಕ ಶ್ರೇಷ್ಠತೆ ಪಡೆದುಕೊಳ್ಳುತ್ತಾರೆ. ಸಂಸ್ಕಾರ ಕೇವಲ ಧಾರ್ಮಿಕ ವಿಧಿಯಲ್ಲ, ಈ ಕ್ರಿಯೆಗೆ ಒಳಗಾದವರೂ ಸಮಾಜ ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಿದ್ದೇಶ್ವರ ಹಾಲಶಂಕರ ಶ್ರೀಗಳು ನುಡಿದರು.
ಪಟ್ಟಣದ ಶ್ರದ್ಧಾ ಕೇಂದ್ರವಾದ ಹಾಲಶಂಕರ ಮಠದಲ್ಲಿ ಕಾರ್ತೀಕೊತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಟುಗಳಿಗೆ ಶಿವದೀಕ್ಷೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಯಾವ ವ್ಯಕ್ತಿಯೂ ಕನಿಷ್ಠ ಅಲ್ಲ. ಪ್ರತಿಯೊಬ್ಬರೂ ಹುಟ್ಟಿನಿಂದಲೇ ಬಂದ ಕೆಲವು ಗುಣಗಳೊಂದಿಗೆ ಸಂಸ್ಕಾರಕ್ಕೆ ಒಳಗಾದಾಗ ಪರಿಪೂರ್ಣತೆಗೆ ಒಳಗಾಗುತ್ತಾರೆ. ವಿವಿಧ ಧರ್ಮ, ಜಾತಿಯವರು ತಮ್ಮ ಪದ್ಧತಿ ಅನುಸರಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ದೀಕ್ಷೆ ಪಡೆದ 6 ಜಂಗಮ ವಟುಗಳಿಗೆ ಮಠದ ವತಿಯಿಂದ ಖಾವಿ ವಸ್ತ್ರ ಮತ್ತು ಇಷ್ಟಲಿಂಗಗಳನ್ನು ನೀಡಲಾಯಿತು. ಪ್ರತಿ ವಟುವಿಗೆ ಕೊನೆಯದಾಗಿ ಕಿವಿಯಲ್ಲಿ ಮಂತ್ರೋಪದೇಶ ಪಠಿಸಲಾಯಿತು.
ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು, ನಿಕಟಪೂರ್ವ ಹಾಲಶಂಕರ ಶ್ರೀಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ಶ್ರೀಮಠದ ಸಧ್ಬಕ್ತರು ಉಪಸ್ಥಿತರಿದ್ದರು.