ಹಾರ್ನ್ ಹಾಕಿದಕ್ಕೆ ಬಸ್ ಚಾಲಕನ ಮೇಲೆ ಬ್ಲೇಡ್‍ನಿಂದ ಹಲ್ಲೆ

ಕಲಬುರಗಿ,ಮೇ.17-ಬಸ್ ನಿಲ್ದಾಣ ಪ್ರವೇಶಿಸುವಾಗ ಹಾರ್ನ್ ಹಾಕಿದ ಕಾರಣಕ್ಕೆ ಬಸ್ ಚಾಲಕನ ಮೇಲೆ ಬ್ಲೇಡ್‍ನಿಂದ ಹಲ್ಲೆ ನಡೆಸಿರುವ ಘಟನೆ ಅಫಜಲಪುರ ಬಸ್ ನಿಲ್ದಾಣದಲ್ಲಿ ಇಂದು ನಡೆದಿದೆ.
ಅಫಜಲಪುರ ಡೀಪೋಗೆ ಒಳಪಟ್ಟ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಂಬೈ-ಅಫಜಲಪುರ ಬಸ್ ಚಾಲಕ ಸುರೇಶ್ ಎಂಬುವವರ ಮೇಲೆ ಅಫಜಲಪುರ ಪಟ್ಟಣದ ನಿವಾಸಿಗಳಾದ ಚಂದ್ರಕಾಂತ ಮಳ್ಳಿ ಮತ್ತು ವೀರೇಶ್ ಹಳಿಮನಿ ಎಂಬುವವರು ಬ್ಲೇಡ್‍ನಿಂದ ಹಲ್ಲೆ ನಡೆಸಿದ್ದು, ಗದ್ದಕ್ಕೆ ಗಾಯವಾಗಿದೆ. ಸುರೇಶ್ ಅವರಿಗೆ ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಸ್ ಅಫಜಲಪುರ ಬಸ್ ನಿಲ್ದಾಣ ಪ್ರವೇಶಿಸುವಾಗ ಚಂದ್ರಕಾಂತ ಮಳ್ಳಿ ಮತ್ತು ವೀರೇಶ್ ಹಳಿಮನಿ ರಸ್ತೆ ಬದಿಗೆ ನಿಂತಿದ್ದರು. ಇದರಿಂದ ಚಾಲಕ ಸುರೇಶ್ ಬದಿಗೆ ಸರಿಯುವಂತೆ ಹಾರ್ನ್ ಹಾಕಿದ್ದಾರೆ. ಇದೇ ಕಾರಣಕ್ಕೆ ಅವರ ಮೇಲೆ ಬ್ಲೇಡ್‍ನಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಚಂದ್ರಕಾಂತ ಮಳ್ಳಿಯನ್ನು ಅಫಜಲಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇನ್ನೋರ್ವ ಆರೋಪಿ ವೀರೇಶ್ ಹಳಿಮನಿ ಪತ್ತೆಗೆ ಜಾಲ ಬೀಸಿದ್ದಾರೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.