ಹಾರನಹಳ್ಳಿ ದೊಡ್ಡಕೆರೆಗೆ ಸಂತೋಷ್ ಬಾಗಿನ

ಅರಸೀಕೆರೆ, ಜು. ೨೫- ವರುಣನ ಕೃಪೆಯಿಂದ ತಾಲ್ಲೂಕಿನ ಎಲ್ಲ ಕೆರೆಗಳು ಭರ್ತಿಯಾಗುತ್ತಿರುವುದು ಭವಿಷ್ಯದ ಬದಲಾವಣೆಯ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.
ಬರೋಬ್ಬರಿ ಹದಿನೈದು ವರ್ಷಗಳ ಬಳಿಕ ಭರ್ತಿಯಾಗಿ ಕೋಡಿ ಬಿದ್ದಿರುವ ಹಾರನಹಳ್ಳಿ ದೊಡ್ಡಕೆರೆಗೆ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಶ್ರೀಗಳ ಸಮ್ಮುಖದಲ್ಲಿ ಕಿಕ್ಕಿರಿದ ಜನಸ್ತೋಮದ ನಡುವೆ ಬಾಗಿನ ಸಮರ್ಪಸಿದರು.
ಸತತ ಬರದಿಂದ ಬಸವಳಿದಿದ್ದ ಅನ್ನದಾತನ ಮೊಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿದ್ದು, ಸಂತಸ ಮೂಡಿದೆ. ಇದು ಬದಲಾವಣೆಯ ದಿಕ್ಸೂಚಿಯೆಂದೇ ಭಾವಿಸಿದ್ದೇನೆ. ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಈಗಾಗಲೇ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಲಭ್ಯವಿರುವ ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಕುರಿತು ವಿಚಾರ ವಿನಿಮಯ ಮಾಡಿಕೊಂಡಿದ್ದು, ಅಗತ್ಯ ಅನುದಾನ ಒದಗಿಸುವುದಾಗಿ ಹೇಳಿದ್ದಾರೆ.
ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಗಿದ್ದು, ಕಣಕಟ್ಟೆ ಹೋಬಳಿ ವ್ಯಾಪ್ತಿಯ ಹಲವು ಕೆರೆಗಳಿಗೆ ಹೊನ್ನವಳ್ಳಿ ಏತ ನಿರಾವರಿ ಮೂಲಕ ಹೇಮೆ ಹರಿದು ಬಂದಿದ್ದಾಳೆ. ಜತೆಗೆ ಯಗಚಿ ಶುದ್ಧ ಕುಡಿಯುವ ನೀರು ಪೂರೈಕೆ, ನಗರ ಸೇರಿ ಹಳ್ಳಿ,ಹಳ್ಳಿಗೆ ಕುಡಿಯುವ ನೀರು ಒದಗಿಸುತ್ತಿರುವುದು ಮಹತ್ವದ ಸಾಧನೆಯಾಗಿದೆ ಎಂದು ಗುಣಗಾನ ಮಾಡಿದರು.
ಸಮಗ್ರ ನಿರಾವರಿ ಅನುಷ್ಠಾನವೇ ನನ್ನ ಮೊದಲ ಆದ್ಯತೆ ಎಂದು ಸಂಕಲ್ಪ ಮಾಡಿದ್ದು, ಬರದ ಸೀಮೆ ಎನ್ನುವ ಹಣೆಪಟ್ಟಿ ಕಳಚುವ ಕೆಲಸ ಮಾಡುಲು ಕಟಿಬದ್ಧನಾಗಿದ್ದೇನೆ. ಇದು ಶಿವಲಿಂಗಜ್ಜಯ್ಯ, ಕೋಡಮ್ಮ, ಕೆಂಚಮ್ಮ, ಯಳವಾರೆ ಚಲುವಪ್ಪನ ಸನ್ನಿಧಿಯಲ್ಲಿ ನಡೆಯುತ್ತಿರುವ ದೊಡ್ಡ ಕಾರ್ಯಕ್ರಮವಾಗಿದ್ದು, ನುಡಿದಂತೆ ನಡೆಯಲಿದ್ದೇನೆ ಎಂದರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋಗಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ತಲುಪಿಸಲು ಸಹಸ್ರಾರು ಕೋಟಿ ರೂ.ಅನುದಾನ ನೀಡಿರುವುದು ಬಡವರ ಪರ ಕಾಳಜಿಯನ್ನು ತೋರುತ್ತಿದೆ. ಜತೆಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜಲಾಶಯ, ಕೆರೆಕಟ್ಟೆಗಳು ಭರ್ತಿಯಾಗಿವೆ. ಇದಕ್ಕೆ ಪೂರಕ ಎನ್ನುವಂತೆ ೧೫ ವರ್ಷದ ಬಳಿಕ ಹಾರನಹಳ್ಳಿ ದೊಡ್ಡಕೆರೆ ಕೋಡಿ ಬಿದ್ದಿರುವುದು ಶುಭ ಸೂಚನೆ ನೀಡಿದೆ.
ಮುಂಬರುವ ದಿನಗಳಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಸಮಗ್ರ ನಿರಾವರಿ ಅನುಷ್ಠಾನದ ಜತೆಗೆ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವೆ. ಪ್ರಕೃತಿ ನಿಯಮದಂತೆ ಬದಲಾವಣೆಗೆ ನೀವೆಲ್ಲರೂ ತೆರೆದುಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಉಡಿ ತುಂಬುವುದರ ಜತೆಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕಲ್ಪಿಸಲಾಗಿತ್ತು. ಯಳವಾರೆ ಹಾರನಹಳ್ಳಿ, ದೊಡ್ಡೇನಹಳ್ಳಿ, ಕನಕಂಚೇನಹಳ್ಳಿ, ಯರೇಹಳ್ಳಿ, ಬೆಲವತ್ತಳ್ಳಿ ಗುತ್ತಿನಕೆರೆ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.