ಹಾರನಹಳ್ಳಿ ದೊಡ್ಡಕೆರೆಗೆ ಶಾಸಕ ಶಿವಲಿಂಗೇಗೌಡ ಬಾಗಿನ ಅರ್ಪಣೆ

ಅರಸೀಕೆರೆ, ಜು. ೨೫- ತಾಲ್ಲೂಕಿನ ಹಾರನಹಳ್ಳಿ ದೊಡ್ಡಕೆರೆ ಕೋಡಿ ಬಿದ್ದ ಪರಿಣಾಮ ಕೋಡಿ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ದೊಡ್ಡ ಕೆರೆಗೆ ಬಾಗಿನ ಅರ್ಪಿಸಿದರು.
ನಂತರ ಗ್ರಾಮದೇವತೆ ಕೋಡಮ್ಮದೇವಿ, ದೂತರಾಯಸ್ವಾಮಿ, ಹುಚ್ಚಮ್ಮದೇವಿ, ಚೆಲುವರಾಯಸ್ವಾಮಿ ದೇವರುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರೈತರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ ಫಲವಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಭಾಗಕ್ಕೆ ಎತ್ತಿನಹೊಳೆ ಯೋಜನೆಯ ನೀರನ್ನು ತೆಗೆದುಕೊಂಡು ಹೋಗಲು ಹಸಿರು ನಿಶಾನೆ ತೋರಿ ಅನುದಾನವನ್ನು ಬಿಡುಗಡೆ ಮಾಡಿದರು. ಅದರ ಫಲವಾಗಿ ಯೋಜನೆ ಸಾಕಾರಗೊಳ್ಳುತ್ತಿದೆ ಎಂದರು.
ಕ್ಷೇತ್ರದಲ್ಲಿ ಬರಗಾಲದಲ್ಲಿ ಇದ್ದು ಬದುಕು ಸಾಗಿಸುತ್ತಿದ್ದರು. ಮುಂದೆ ಹೊಸ ಚೇತನದೊಂದಿಗೆ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಎಲ್ಲವೂ ಅನುಕೂಲಕರವಾಗಲಿದೆ. ಕೆರೆ ತುಂಬಿ ಪ್ರವಾಸಿಗರ ಆಕರ್ಷಣೆಗೆ ಜಲ ವಿಹಾರ ದೋಣಿಯ ಅನುಕೂಲವನ್ನು ಕಲ್ಪಿಸಲಾಗಿದೆ ಎಂದರು.
ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಬರಗಾಲವನ್ನು ಅನುಭವಿಸಿದ್ದರು. ದೇವರ ಕೃಪೆಯಿಂದ ಗಂಗೆಯನ್ನು ಹರಿಸಿದ್ದು, ಜನರಿಗೆ ನೆಮ್ಮದಿ ದೊರಕಿದೆ. ಶಾಸಕರು ಕ್ಷೇತ್ರಕ್ಕೆ ಇನ್ನೂ ಹೆಚ್ಚು ಕೆಲಸ ಮಾಡಲಿ, ಅವರಿಗೆ ಶಿವಲಿಂಗ ಅಜ್ಜಯ್ಯನ ಆಶೀರ್ವಾದವಿರುತ್ತದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಲೋಕೇಶ್, ಉಪಾಧ್ಯಕ್ಷೆ ಮಣಿ ಮೋಹನ್, ಜಿಲ್ಲಾ ಪಂಚಾಯ್ತಿ ಸದಸ್ಯ ಬಿಳಿಚೌಡಯ್ಯ, ಗಿಜಿಹಳ್ಳಿ ಧರ್ಮಶೇಖರ್, ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಪ್ರೇಮಾ ಧರ್ಮೇಶ್, ಮುಖಂಡರಾದ ಮುರುಂಡಿ ಶಿವಯ್ಯ, ಧರ್ಮಣ್ಣ, ದೇವರಾಜ್, ಶಿವು, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.