ಹಾರಕೂಡ ಶ್ರೀಗಳಿಂದ ಮನವಿ ಪತ್ರ ಬಿಡುಗಡೆ

ಬಸವಕಲ್ಯಾಣ:ನ.12: ಡಾ. ರಾಜಕುಮಾರ ಹೆಬ್ಬಾಳೆಯವರು ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಅವರ ಪ್ರಣಾಳಿಕೆ ಅಥವಾ ಮನವಿ ಪತ್ರವನ್ನು ಹಾರಕೂಡದ ಶ್ರೀಮಠದಲ್ಲಿ ಪೀಠಾಧೀಪತಿಗಳಾದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಬಿಡುಗಡೆ ಮಾಡಿದರು.
ಮನವಿ ಪತ್ರ ಬಿಡುಗಡೆಯ ನಂತರ ಮಾತನಾಡಿದ ಪೂಜ್ಯ ಶ್ರೀಗಳು “ಡಾ. ರಾಜಕುಮಾರ ಹೆಬ್ಬಾಳೆಯವರು ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ವತಿಯಿಂದ ಬೀದರ ಜಿಲ್ಲೆಗೆ ಅನೇಕ ಕಾರ್ಯಕ್ರಮಗಳನ್ನು ತಂದು ವಿನೂತನ ಕಾರ್ಯ ಮಾಡಿದ್ದಾರೆ. ಇತ್ತಿಚಿಗೆ ಬಸವಕಲ್ಯಾಣದಲ್ಲಿ ವಲಯ ಸಾಂಸ್ಕøತಿಕ ಕೇಂದ್ರ ನಾಗಪುರ ವತಿಯಿಂದ ರಾಷ್ಟ್ರೀಯ ಬಹುಭಾಷಾ ಕವಿಗೋಷ್ಠಿ ಕೂಡಾ ಮಾಡಿದ್ದಾರೆ. ಅನೇಕ ಜನಪದ ಸಮ್ಮೇಳನಗಳು, ತರಬೇತಿ ಕಮ್ಮಟಗಳು ಹಾಗೂ ಇನ್ನಿತರ ರಚನಾತ್ಮಕ ಕಾರ್ಯ ಮಾಡಿದ್ದಾರೆ. ರಾಜ್ಯದ ಅತಿ ಕಿರಿಯ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಡಾ. ರಾಜಕುಮಾರ ಹೆಬ್ಬಾಳೆಯಾಗಿದ್ದಾರೆ. ಕನ್ನಡ ನಾಡು-ನುಡಿ ಪರ ಕೆಲಸ ಮಾಡಿದವರಿಗೆ ನಮ್ಮ ಸಹಕಾರ ಇರುತ್ತದೆ. ನಮ್ಮ ಆಶೀರ್ವಾದ ಸದಾ ಇರುತ್ತದೆ ಎಂದು ಪೂಜ್ಯ ಚನ್ನವೀರ ಶಿವಾಚಾರ್ಯರು ನುಡಿದರು.
ಇದೇ ವೇಳೆ ಬಸವಕಲ್ಯಾಣ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ ಪತಂಗೆ, ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ಡಾ. ಬಸವರಾಜ ಸ್ವಾಮಿ, ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಚಂದ್ರಕಾಂತ ಸ್ವಾಮಿ, ಎಸ್.ಬಿ.ಕುಚಬಾಳ, ಡಾ. ಜಗನ್ನಾಥ ಹೆಬ್ಬಾಳೆ, ಡಾ. ರಾಜಕುಮಾರ ಹೆಬ್ಬಾಳೆ ಸೇರಿದಂತೆ ಹಾರಕೂಡ ಗ್ರಾಮದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಉಪಸ್ತಿತರಿದ್ದರು.