ಹಾರಕಭಾವಿಲಿ ಬಸವ ಜಯಂತಿ, ಎತ್ತುಗಳ ಮೆರವಣಿಗೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.23 :- ತಾಲೂಕಿನ ಹಾರಕಭಾವಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಸಮಾಜ ಸುಧಾರಕ, ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ನಡೆಸಿ ಗ್ರಾಮದ ಆರಾಧ್ಯ ದೈವವಾದ ಶ್ರೀ ಚೌಡೇಶ್ವರಿ ದೇವಸ್ಥಾನದ ಬಳಿ ಗ್ರಾಮದ ಮುಖಂಡರ ನೇತೃತ್ವದಲ್ಲಿ ಆಚರಿಸಲಾಯಿತು.
ಗ್ರಾಮದ ಹಿರಿಯ ಮುಖಂಡ ಹಾಗೂ ತಾಲೂಕು ಪಂಚಾಯತಿ ಮಾಜಿ ಸದಸ್ಯ ಶೇಖರಪ್ಪ ಮಾತನಾಡಿ 12ನೇ ಶತಮಾನದಲ್ಲೇ ಸಮಸಮಾಜದ ಏಳ್ಗೆಗೆ ಶ್ರಮಿಸಿದ ಮಹಾ ಸಮಾಜ ಸುಧಾರಕರಾಗಿ ವಚನ ಸಾಹಿತ್ಯಗಳ ಮೂಲಕ ನೈಜ ಜೀವನಕ್ಕೆ ಹತ್ತಿರವಾಗುವ ಸಾಲುಗಳನ್ನು ರಚಿಸಿದ ಮಹಾ ಕವಿ ಚೇತನ ಇವರಾಗಿದ್ದಾರೆ ಇವರ ಆದರ್ಶ ತತ್ವಸಿದ್ಧಾಂತ ನಾವೆಲ್ಲರೂ ಪರಿಪಾಲಿಸಿದಾಗ ಅವರ ಜನ್ಮದಿನಾಚರಣೆಗೆ ಸಾರ್ಥಕವಾಗಬಲ್ಲದು ಎಂದರು.
ಸಂಗಳ್ ಕೊಟ್ರೇಶ ಮಾತನಾಡಿ ಬಸವೇಶ್ವರರರು ಒಂದು ಜಾತಿ ಧರ್ಮಕ್ಕೆ ಸೇರದೆ ಎಲ್ಲಾ ಜಾತಿಧರ್ಮದ ವಚನಕಾರರನ್ನು ಒಂದೆಡೆ ಸೇರಿಸಿ ಅದಕ್ಕೆ ಅನುಭವ ಮಂಟಪ ಎಂದು ಹೆಸರಿಟ್ಟರು ಅವರ ವಚನಸಾಹಿತ್ಯದ ಸಾಲುಗಳು ಇಂದಿನ ಜನಜೀವನದ ಪ್ರತಿ ಹೆಜ್ಜೆಯನ್ನು ಬಿಂಬಿಸುತ್ತವೆ ಅವರ ತತ್ವಾದರ್ಶಗಳ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ಕೊಟ್ರೇಶ ತಿಳಿಸಿದರು.
ಬಸವ ಜಯಂತಿ ಪ್ರಯುಕ್ತ ಎತ್ತುಗಳಿಗೆ ಸಿಂಗಾರಗೊಳಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಗ್ರಾಮಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರು ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.