ಹಾನಿಯಾಗಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ

ಕೆ.ಆರ್.ಪೇಟೆ.ಆ.06:- ವರುಣನ ಅವಕೃಪೆಗೆ ಒಳಗಾಗಿ ತಾಲ್ಲೂಕಿನಾದ್ಯಂತ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಶೀಘ್ರವಾಗಿ ರಸ್ತೆ ಮತ್ತು ಸೇತುವೆಗಳನ್ನು ದುರಸ್ತಿಗೊಳಿಸುವಂತೆ ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ಸಚಿವರು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ತಾಲ್ಲೂಕು ಜೆಡಿಎಸ್ ಮುಖಂಡರುಗಳು ಹೆಚ್.ಟಿ. ಮಂಜು ನೇತ್ರತ್ವದಲ್ಲಿ ಮಳೆಹಾನಿಯಿಂದ ಹಾನಿಗೊಳಗಾಗಿರುವ ತಾಲ್ಲೂಕಿನ ವಿವಿಧ ಗ್ರಾಮಗಳಾದ ಲೋಕನಹಳ್ಳಿ,ಅಘಲಯ, ಸಂತೇಬಾಚಹಳ್ಳಿ, ಮಾವಿನಕಟ್ಟೆಕೊಪ್ಪಲು ಸೇರಿದಂತೆ ಹಲವು ಸ್ಥಳಗಳಿಗೆ ತೆರಳಿ ಪರಿಶೀಲಿಸಿ ನಂತರ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಸರ್ಕಾರ ಹಾಗೂ ಜಿಲ್ಲಾಡಳಿತ ಕಛೇರಿಯಲ್ಲಿ ಕುಳಿತು ಕೇಳುವುದನ್ನು,ವರದಿ ತರಿಸಿಕೊಳ್ಳುವುದನ್ನು ಮತ್ತು ಆದೇಶ ಮಾಡುವುದನ್ನು ಬಿಟ್ಟು ಹಾನಿಯಿಂದ ರೈತರು ಅನುಭವಿಸುತ್ತಿರುವ ನರಕಯಾತನೆಯ ವಾಸ್ಥವಿಕ ಪರಿಸ್ಥಿತಿಯನ್ನು ತಿಳಿಯಲು ಖುದ್ದು ಘಟನಾ ಸ್ಥಳಕ್ಜೆ ಆಗಮಿಸಬೇಕು. ಕೆಲವು ಗ್ರಾಮಗಳಿಗೆ ತೆರಳಲು ಸಂಪರ್ಕವೇ ಇಲ್ಲದಂತೆ ಸೇತುವೆಗಳು ಕೊಚ್ವಿಕೊಂಡು ಹೋಗಿವೆ. ಇನ್ನು ಕೆಲವು ಕಡೆ ಮಳೆಗಾಲ ಆರಂಭವಾದರೆ ಸಾರ್ವಜನಿಕರಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದ್ದರೂ ಗ್ರಾಮಸ್ಥರು ಹಲವಾರು ಬಾರಿ ಸೇತುವೆ ನಿರ್ಮಾಣಕ್ಕೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಂದಾಯ ಸಚಿವರೇ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ನಿಮ್ಮ ಭೇಟಿ ಫಲಪ್ರದವಾಗಬೇಕಾದರೆ ಒಂದು ತಿಂಗಳೊಳಗೆ ಬೆಳೆ ಹಾನಿಯಾದವರಿಗೆ ಪರಿಹಾರ, ಮನೆಹಾನಿಯಾದವರಿಗೆ ಆಶ್ರಯ ಮನೆ, ಹಾನಿಯಾಗಿರುವ ರಸ್ತೆಗಳ ಶೀಘ್ರ ರಿಪೇರಿ ಮುಂತಾದ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ಸಾರ್ವಜನಿಕರಿಗೆ, ರೈತರಿಗೆ ಅನುಕೂಲ ಕಲ್ಪಿಸಬೇಕು. ಕಂದಾಯ ಇಲಾಖೆಯ ಅಧಿಕಾರಿಗಳು ಇಂತಹ ಸಂಕಷ್ಟದ ಸಮಯದಲ್ಲಿ ರೈತಪರವಾಗಿ ಕೆಲಸ ನಿರ್ವಹಿಸುವ ಮೂಲಕ ಮಾನವೀಯತೆ ಮೆರೆಯಬೇಕು. ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಾಲ್ಲೂಕಿನ ರೈತರ ಹಿತ ಕಾಯುವ ಕೆಲಸ ಮಾಡಬೇಕು ಇಲ್ಲದಿದ್ದರೆ ಇಡೀ ತಾಲ್ಲೂಕಿನ ರೈತ ಸಮೂಹ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಳೆಹಾನಿ ಪ್ರದೇಶಗಳ ಭೇಟಿ ಸಮಯದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಂ, ತಾಪಂ ಮಾಜಿ ಸದಸ್ಯ ಮೋಹನ್, ಸಂತೇಬಾಚಹಳ್ಳಿ ಹೋಬಳಿ ಅಧ್ಯಕ್ಷ ರವಿ, ಲಕ್ಷ್ಮಣ, ಜಯರಾಮು ಸೇರಿದಂತೆ ಹಲವರು ಹಾಜರಿದ್ದರು.