ಹಾನಿಗೊಳಗಾದ ದ್ರಾಕ್ಷಿ ಬೆಳೆಗೆ ಪರಿಹಾರ ಘೋಷಣೆ ಮಾಡುವಂತೆ ಸರಕಾರಕ್ಕೆ ಒತ್ತಾಯ

ವಿಜಯಪುರ, ನ.23-ಅಕಾಲಿಕ ಮಳೆ ಹಾನಿಯಿಂದ ರಾಜ್ಯದ ರೈತರು ಕಂಗಾಲಾದ ಬೆನ್ನಲ್ಲೇ ದ್ರಾಕ್ಷಿ ಬೆಳೆಗಾರರೂ ಸಂಕಷ್ಟಕ್ಕೀಡಾಗಿದ್ದಾರೆ.
ಮೋಡ ಕವಿದ ವಾತಾವರಣ ಹಾಗೂ ಧಿಡೀರ್ ಮಳೆಯಿಂದ ದ್ರಾಕ್ಷಿ ಕಣಜ, ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ದ್ರಾಕ್ಷಿ ಬೆಳೆಗೆ ರೋಗ ಬಾಧಿಸಿದ್ದು, ರೈತರು ದಿಗಿಲು ಬೀಳುವಂತಾಗಿದೆ. ವಿಜಯಪುರ ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್, ಕೊಪಳ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಉತ್ತರ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ 9700 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದ್ದು, ಬಹುತೇಕ ದ್ರಾಕ್ಷಿಬೆಳೆಗಾರರು ಈಗ ಚಾಟ್ನಿ (ಫೆÇನಿಂಗ್) ಮಾಡಿದ್ದಾರೆ ಮುಂಚಿತವಾಗಿ ಚಾಟ್ನಿ ಮಾಡಿದ ತೋಟಗಳಲ್ಲಿ ಈಗಾಗಲೇ ಹೂಗಳು ಮೂಡಿ, ಕಾಯಿ ಕಟ್ಟುವ ಹಂತದಲ್ಲಿವೆ.
ಇಂತಹ ಸ್ಥಿತಿಯಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಳೆ ಸುರಿದಿದ್ದರಿಂದ ದೌಣಿ ಹಾಗೂ ಬೂದು ರೋಗ ಆವರಿಸಿದೆ. ಕಳೆದ ಹಲವು ದಿನಗಳಿಂದ ಬೆಳಗ್ಗೆ ಮಂಜು ಕವಿದ ವಾತಾವರಣದಿಂದ ತಂಗಾಳಿ ಬೀಸುತ್ತಿದ್ದು, ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚುತ್ತಿದೆ. ಕಳೆದೆರಡು ದಿನಗಳಿಂದ ಸಂಜೆ ಮೋಡ – ತುಂತುರು ಮಳೆ ಸುರಿಯುತ್ತಿದೆ. ಇಂತಹ ವಾತಾವರಣ ದ್ರಾಕ್ಷಿ ಬೆಳೆಗೆ ವಿಷಮವಾಗಿದ್ದು, ದೌಣಿ ಹಾಗೂ ಬೂದು ರೋಗ ಬೇಗನೇ ವ್ಯಾಪಿಸಿ ಹೂವು, ಕಾಯಿ ಕಟ್ಟುವಹೀಚುಗಳನ್ನು ಮುರುಟುವಂತೆ ಮಾಡುತ್ತದೆ. ಮುರುಟಿದ ಹೂವು, ಹೀಚುಗಳು ಗೊನೆ ಯಿಂದ ಕಳಚುತ್ತಿವೆ. ಹೆಚ್ಚು ತಂಪು ಕಾಣಿಸಿಕೊಂಡರೆ ರೋಗ ಬಾಧಿಸಿ ಕೊಳೆಯುತ್ತಿರುವ ದ್ರಾಕ್ಷಿ ಬೆಳೆ ಕೊಳೆ ರೋಗ ಕಾಣಿಸಿಕೊಂಡಿದ್ದರಿಂದ ಗೊನೆಯೇ ಕಳಚಿ ನೆಲಕ್ಕೆ ಬೀಳುತ್ತಿವೆ. ಇದರಿಂದ ಇಳುವರಿ ಮೇಲೆಯೂ ಹೊಡೆತ ಬೀಳುವ ಸಾಧ್ಯತೆ ಇದೆ. ಕಳೆದೆರಡು ದಿನಗಳಿಂದ ಮಂಜ, ಮೋಡ ಕವಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ವಿವಿಧ ರೋಗಗಳು ಬಾಧಿಸುತ್ತಿವೆ. ರೋಗ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೆಕು. ಇದರಿಂದ ವರ್ಷದ ಬೆಳೆ ಕೈಕೊಟ್ಟರೆ ಲಕ್ಷಾಂತರ ರೂ ಸಾಲ ಮಾಡಿದ ರೈತರು ಬೀದಿಬೀಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಕಳೆದ 8-10 ದಿನಗಳಿಂದ ಹವಾಮಾನದಲ್ಲಾದ ವೈಪರೀತ್ಯದಿಂದ ಸಾಕಷ್ಟು ದ್ರಾಕ್ಷಿ ಬೆಳೆ ಹಾಳಾಗಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾನಿಗೊಳಗಾದ ದ್ರಾಕ್ಷಿ ತೋಟಗಳಿಗೆ ಭೆಟ್ಟಿಕೊಟ್ಟು, ಹಾನಿ ಪ್ರಮಾಣವನ್ನು ಅಂದಾಜಿಸಿ ಸರಕಾರಕ್ಕೆ ಕೂಡಲೇ ವರದಿಯನ್ನು ಒಪ್ಪಿಸಬೇಕು. ಹಾಗೂ ಈ ಇಲಾಖೆಯ ಆಧಾರದ ಮೇಲೆ ಸರಕಾರವು ಕೂಡಲೇ ಹಾನಿಗೊಳಗಾದ ದ್ರಾಕ್ಷಿ ಬೆಳೆ ರೈತರಿಗೆ ಪರಿಹಾರದ ಯೋಜನೆಯನ್ನು ರೂಪಿಸಬೇಕೆಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅದ್ಯಕ್ಷರಾದ ಡಾ. ಕೆ.ಎಚ್. ಮುಂಬಾರೆಡ್ಡಿ ಹಾಗೂ ಸಂಘದ ಪದಾಧಿಕಾರಿಗಳು ಸರಕಾರಕ್ಕೆ ಪ್ರಕಟಣೆಯ ಮೂಲಕ ಒತ್ತಾಯಪಡಿಸಿದ್ದಾರೆ.