ಹಾನಿಗೊಂಡ ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್‌ಗೆ ಡಿಸಿ ಭೇಟಿ


ಪಡುಬಿದ್ರಿ, ಮೇ ೨೦- ತೌಕ್ತೆ ಚಂಡಮಾರುತದ ಪರಿಣಾಮ ಹಾನಿಗೀಡಾಗಿರುವ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಪಡುಬಿದ್ರಿಯ ಬ್ಲೂಫ್ಲ್ಯಾಗ್ ಬೀಚ್‌ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಬುಧವಾರ ಭೇಟಿ ನೀಡಿ ಕಡಲತೀರದಲ್ಲಿ ಉಂಟಾದ ಹಾನಿಯನ್ನು ಪರಿಶೀಲಿಸಿದರು.
ಪ್ರಕ್ಷುಬ್ಧಗೊಂಡ ಕಡಲಿನ ದೈತ್ಯ ಅಲೆಗಳು ದಡವನ್ನು ಅಪ್ಪಳಿಸುವ ವೇಳೆ ತಂದು ಹಾಕಿದ ಮರಳು ಇಡೀ ಪ್ರದೇಶವನ್ನು ಹರಡಿಕೊಂಡಿದೆ. ಹಾನಿಗೊಳಗಾದ ಕಡಲ ತೀರವನ್ನು ಸಮರೋಪಾದಿಯಲ್ಲಿ ಮತ್ತೆ ಸಜ್ಜುಗೊಳಿಸಿ, ಒಂದು ವಾರ ದೊಳಗೆ ಪ್ರವಾಸಿಗರ ಆಕರ್ಷಣೆಗೆ ಉಪಯೋಗ ವಾಗುವಂತೆ ಮಾಡಲಾ ಗುವುದು ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು. ಚಂಡಮಾರುತದಿಂದ ಹಾನಿಗೊಳಗಾದ ಬ್ಲೂಫ್ಲ್ಯಾಗ್ ಪ್ರದೇಶದಲ್ಲಿ ತುಂಬಿರುವ ಮರಳನ್ನು ತೆಗೆದು ಸ್ವಚ್ಛಗೊಳಿಸಿ, ಶೀಘ್ರವೇ ಮೊದಲಿದ್ದಂತೆ ಸುಸ್ಥಿತಿಗೆ ತರುವುದಾಗಿ ಸ್ಥಳದಲ್ಲಿ ಹಾಜರಿದ್ದ ಬ್ಲೂಫ್ಲ್ಯಾಗ್ ಸಿಬ್ಬಂದಿ ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರು. ಪಡುಬಿದ್ರಿ ಕಡಲತೀರದ ಅಭಿವೃದ್ಧಿಗೆ ಶ್ರಮಿಸಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿ ರುವುದಕ್ಕೆ ತಾವು ಸದಾ ಉಪಕೃತರಾಗಿರುವುದಾಗಿ ಅವರು ಜಿಲ್ಲಾಧಿಕಾರಿಗೆ ತಿಳಿಸಿದರು. ಬ್ಲೂ ಫ್ಲ್ಯಾಗ್ ಬೀಚ್‌ನ್ನು ನಿರಂತರ ಸುಸಜ್ಜಿತವಾಗಿ ಮುಂದುವರೆಸಿಕೊಂಡು ಹೋಗಲು ಅವಶ್ಯಕವಾಗಿರುವ ಎಲ್ಲಾ ಉಪಕ್ರಮ ಕೈಗೊಳ್ಳಲು ಅಗತ್ಯಕ್ರಮ ವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ಬನವಾಸಿ ಇವರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಬ್ಲೂ ಫ್ಲ್ಯಾಗ್ ಬೀಚ್ ಮ್ಯಾನೇಜರ್ ವಿಜಯ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ರಮೇಶ್ ದೇವಾಡಿಗ, ಗ್ರಾಮ ಸಹಾಯಕ ಜಯರಾಂ ಹಾಗೂ ಇತರರು ಹಾಜರಿದ್ದರು.