ಹಾನಿಗೀಡಾದ ಮನೆ, ಶಾಲೆ, ಅಂಗನವಾಡಿ ಕಟ್ಟಡಗಳ ಶೀಘ್ರ ದುರಸ್ತಿಗೆ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.11:- ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಮನೆ, ಶಾಲೆ, ಅಂಗನವಾಡಿ ಕೊಠಡಿಗಳ ದುರಸ್ತಿ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ವಿಪತ್ತು ಸ್ಪಂದನ ನಿಧಿ ಅನುದಾನದಡಿ ಈಗಾಗಲೇ ಆರ್ಥಿಕ ನೆರವು ನೀಡಿರುವ ಮನೆಗಳ ದುರಸ್ತಿ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಪೂರ್ಣ ಮಾಡಬೇಕು. ಶಿಥಿಲವಾಗಿರುವ ಅಂಗನವಾಡಿ, ಶಾಲೆ ಕೊಠಡಿಗಳನ್ನೂ ಸಹ ಕೂಡಲೇ ದುರಸ್ತಿ ಮಾಡಬೇಕು. ಈಗಾಗಲೇ ನೀಡಿರುವ ಪಟ್ಟಿ ಹಾಗೂ ಬಿಡುಗಡೆಯಾಗಿರುವ ಅನುದಾನಕ್ಕೆ ಅನುಗುಣವಾಗಿ ಕಾಮಗಾರಿ ಕೈಗೊಂಡಿರಬೇಕು. ಯಾವುದೇ ಕೆಲಸವನ್ನು ಬಾಕಿ ಉಳಿಸಿಕೊಳ್ಳದೇ ನಿಗದಿತ ಅವಧಿಯೊಳಗೆ ಮುಗಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕುಡಿಯುವ ನೀರಿನ ಪೂರೈಕೆಯಲ್ಲಿ ಅತ್ಯಂತ ಎಚ್ಚರ ವಹಿಸಬೇಕಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರು ಸರಬರಾಜು ಆಗಬೇಕು. ಇದಕ್ಕಾಗಿ ನೀರಿನ ಮಾದರಿಯನ್ನ ಪರೀಕ್ಷಿಸಿ ಖಾತರಿಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಬೇಕು. ಶುದ್ದ ಕುಡಿಯುವ ನೀರಿನ ಘಟಕಗಳು, ನೀರು ಸರಬರಾಜು ಮಾಡುವ ಘಟಕಗಳಲ್ಲಿ ಹೆಚ್ಚು ನಿಗಾವಹಿಸಿ ಪರಿಶೀಲಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಸಾಂಕ್ರಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳಿಗೆ ಮುಂದಾಗಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಕ್ರಮವಹಿಸಬೇಕು. ಮಳೆಗಾಲದಲ್ಲಿ ಕಾಣಿಸಿಕೊಳ್ಳಬಹುದಾದ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನೀರಿನ ಮಾದರಿ ಗುಣಮಟ್ಟವನ್ನು ಖಾತರಿಪಡಿಸಬೇಕು ಎಂದರು.
ಜಿಲ್ಲೆಯಲ್ಲಿರುವ ಕೆರೆಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಕೃಷಿ, ತೋಟಗಾರಿಕೆ ಇಲಾಖೆಗಳು ರೈತರಿಗೆ, ಬೆಳೆಗಾರರಿಗೆ ಕಾಲಕಾಲಕ್ಕೆ ಅನುಗುಣವಾಗಿ ಕೈಗೊಳ್ಳಬೇಕಿರುವ ಕೃಷಿ ಚಟುವಟಿಕೆಗಳ ಬಗ್ಗೆ ಸಲಹೆ ನೀಡಬೇಕು. ಮಾಹಿತಿ ಮಾರ್ಗದರ್ಶನವನ್ನು ವಿವಿಧ ವಿಧಾನಗಳ ಮೂಲಕ ಪರಿಣಾಮಕಾರಿಯಾಗಿ ತಲುಪಿಸಬೇಕು. ಪಶುಸಂಗೋಪನೆ ಇಲಾಖೆ ಜಾನುವಾರುಗಳಿಗೆ ಸೂಕ್ತ ಲಸಿಕೆ, ಔಷದೋಪಚಾರಗಳನ್ನು ನಿಗದಿತ ಸಮಯಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.
ಮಾನವ ಪ್ರಾಣಿ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಯೋಜಿತವಾಗಿ ಕಾರ್ಯನಿರ್ವಹಿಸಬೇಕಿದೆ. ಕಾಡು ಪ್ರಾಣಿಗಳಿಂದ ಆಗುವ ಬೆಳೆನಷ್ಟ, ಪ್ರಾಣಹಾನಿ ಸಂದರ್ಭಗಳಲ್ಲಿ ನೀಡುವ ಪರಿಹಾರವನ್ನು ತ್ವರಿತವಾಗಿ ತಲುಪಿಸಬೇಕಿದೆ. ವಿಳಂಬ ಮಾಡದೇ ಸಂತ್ರಸ್ತರಿಗೆ, ಬೆಳೆಗಾರರು ರೈತರಿಗೆ ಸೌಲಭ್ಯ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಪೂವಿತಾ ಅವರು ಮಾತನಾಡಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ತಾಲೂಕು ಹಂತದಲ್ಲಿಯೂ ಕರೆಯಬೇಕು. ಇದರಿಂದ ಪ್ರಕೃತಿ ವಿಕೋಪಗಳನ್ನು ಪರಿಣಾಮಕಾರಿಯಾಗಿ ತಡೆಯಲು, ಮುನ್ನೆಚ್ಚರಿಕೆ ವಹಿಸಲು ಸಹಾಯಕವಾಗಲಿದೆ. ಸಮಸ್ಯೆಗಳು ಉಲ್ಬಣಿಸದಂತೆ ನೋಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.