ಹಾನಿಗೀಡಾದ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ

ಲಕ್ಷ್ಮೇಶ್ವರ,ಸೆ9: ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳ ವೀಕ್ಷಣೆಗೆ ಗುರುವಾರ ಕೇಂದ್ರದ ಅಧ್ಯಯನ ತಂಡ ತಾಲೂಕಿಗೆ ಭೇಟಿ ನೀಡಿ ಪರಿಶೀಲಿಸಿತು.
ಕೇಂದ್ರದ ಜಲ ಶಕ್ತಿ ಮಂತ್ರಾಲಯದ ಅಶೋಕ್ ಕುಮಾರ್ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಅಧೀಕ್ಷಕ ಎಂಜಿನಿಯರ್ ವಿವಿ ಶಾಸ್ತ್ರಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಲಹೆಗಾರ ಡಾಕ್ಟರ್ ಜಿ ಎಸ್ ಶ್ರೀನಿವಾಸ ರೆಡ್ಡಿ ನೇತೃತ್ವದ ತಂಡ ತಾಲೂಕಿನ ಶೆಟ್ಟಿಕೆರಿ ಕೆರೆ ಮತ್ತು ಲಕ್ಷ್ಮೇಶ್ವರ ಪಟ್ಟಣದ ಇಟ್ಟೀಕೆರೆಯನ್ನು ವೀಕ್ಷಿಸಿತು.
ಶೆಟ್ಟಿಕೆರೆಯಲ್ಲಿ ಕೇಂದ್ರದ ತಂಡ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರರಿಗೆ ಕೆರೆಯ ಬಗ್ಗೆ ನಿಗಾವಹಿಸುವಂತೆ ಮತ್ತು ಏನಾದರೂ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ಕೂಡಲೇ ಮಾಡುವಂತೆ ಸೂಚಿಸಿದರು ಮಾರ್ಗ ಮಧ್ಯದಲ್ಲಿ ಕುಂದ್ರಳ್ಳಿ ಬಟ್ಟೂರು ರಸ್ತೆಗಳಲ್ಲಿನ ಹಾಳಾದ ಬೆಳೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ. ಎಲ್. ವೈಶಾಲಿಯವರು ಕೇಂದ್ರದ ತಂಡಕ್ಕೆ ಮಳೆಯಿಂದ ಹಾನಿ ಗೀಡಾಗಿರುವ ಶಾಲಾ ಕಟ್ಟಡಗಳು ಮತ್ತು ರಸ್ತೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು ತಾಲೂಕಿನಲ್ಲಿ ವಿಪರೀತವಾದ ಮಳೆಯಿಂದಾಗಿ ಸುಮಾರು 12 ಸಾವಿರ ಹೆಕ್ಟರ್ ಬೆಳೆ ಹಾನಿ ಗೀಡಾದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ತಂಡ ಲಕ್ಷ್ಮೇಶ್ವರ ಪ್ರವೇಶ ಸುತ್ತಿದಂತೆಯೇ ಹಾಳಾದ ರಸ್ತೆಗಳು ತಂಡವನ್ನು ಸ್ವಾಗತಿಸಿದವು. ಅಧಿಕಾರಿಗಳ ತಂಡ ಇದನ್ನು ಮನವರಿಕೆ ಮಾಡಿಕೊಂಡಿತು. ನಂತರ ಇಟ್ಟೀಕೆರೆಯನ್ನು ಅವಲೋಕಿಸಿ ಸ್ಥಳೀಯ ಆಡಳಿತ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿತು.
ಕೇಂದ್ರದ ತಂಡದೊಂದಿಗೆ ಜಿಲ್ಲಾಧಿಕಾರಿ ಎಂಎಲ್ ವೈಶಾಲಿ, ಸಿಇಒ ಡಾಕ್ಟರ್ ಬಿ ಸುಶೀಲ, ಅಪರ್ ಜಿಲ್ಲಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ತಹಸಿಲ್ದಾರ್ ಪರಶುರಾಮ್ ಸತ್ತಿಗೇರಿ, ಜಿಲ್ಲೆಯ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಕೇಂದ್ರದ ನಿಯೋಗದೊಂದಿಗೆ ಇದ್ದರು. ಕುಂದ್ರಳ್ಳಿಯಲ್ಲಿ ಬಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ ಗೌಡ ಪಾಟೀಲ್, ಶಾಸಕರ ಪುತ್ರ ಮಹೇಶ ಲಮಾಣಿ, ಬಟ್ಟೂರು ಗ್ರಾಮ ಪಂಚಾಯತಿಯ ಸದಸ್ಯರು, ಗ್ರಾಮಗಳ ರೈತರು ಇದ್ದರು.