ಹಾಡ ಹಗಲೇ ಭೀಕರ ಹತ್ಯೆ

ಬೆಂಗಳೂರು,ಜೂ.೨೪-ಬಿಬಿಎಂಪಿಯ ಛಲವಾದಿಪಾಳ್ಯ ವಾರ್ಡ್ ನ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ ಬಳಿ ನಡೆದಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಕಾಟನ್ ಪೇಟೆಯ ಛಲವಾದಿಪಾಳ್ಯದ ಫ್ಲವರ್ ಗಾರ್ಡನ್‌ನ ಕಚೇರಿ ಒಳಗೆ ಇಂದು ಬೆಳಿಗ್ಗೆ ೧೦.೧೫ರ ವೇಳೆ ಹೋಗುತ್ತಿದ್ದ ರೇಖಾ ಕದಿರೇಶ್ ಅವರನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.
ಕೆಳಗೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗಾಯಾಳು ರೇಖಾರನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಛಲವಾದಿಪಾಳ್ಯ ವಾರ್ಡ್ ನಲ್ಲಿ ಕೊರೊನಾ ಸಂಕಷ್ಟಕ್ಕೆ ಸಿಲುಕಿದವರಿಗೆ ರೇಖಾ ಕದಿರೇಶ್ ಹಲವು ದಿನಗಳಿಂದ ಪುಡ್ ಕಿಟ್ ವಿತರಿಸುತ್ತಿದ್ದು ಅದನ್ನು ಗಮನಿಸಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ.
ರೇಖಾ ಕದಿರೇಶ್ ಕೊಲೆಯಾದ ಸ್ಥಳ ಹಾಗೂ ಅವರ ಮೃತದೇಹವಿರುವ ಕಿಮ್ಸ್ ಆಸ್ಪತ್ರೆಯ ಬಳಿ ಬಿಗಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಕೈಗೊಳ್ಳಲಾಗಿದ್ದು ಕೃತ್ಯವೆಸಗಿದ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ ಎಂದರು.
ಪ್ಲ್ಯಾನ್ ಮಾಡಿ ರೇಖಾ ಕೊಲೆ ಮಾಡಿರುವ ದುಷ್ಕರ್ಮಿಗಳು ರೇಖಾರನ್ನು ಕೊಲೆ ಮಾಡಲು ಬಂದಿದ್ದ ದುಷ್ಕರ್ಮಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಘಟನಾ ಸ್ಥಳದಲ್ಲಿನ ಎರಡೂ ಬದಿಯೂ ಸಿಸಿ ಕ್ಯಾಮರಾಗಳನ್ನು ಬೇರೆಡೆ ತಿರುಗಿಸಿದ್ದಾರೆ.
ಕಚೇರಿಯ ಒಳಗಿದ್ದ ರೇಖಾರನ್ನು ಹೊರಗೆ ಕರೆಸಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ಟೆಂಡರ್ ವಿಚಾರಕ್ಕೆ ಪರಿಚಯಸ್ಥ ಇಬ್ಬರು ರೇಖಾ ಕದಿರೇಶ್ ಅವರನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ವಿಶೇಷ ತಂಡ ರಚನೆ:
ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಅವರು ಮಾತನಾಡಿ ಕೃತ್ಯವನ್ನು ಎಲ್ಲಾ ಅಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಕೊಲೆ ಕೃತ್ಯವನ್ನು ಕಂಡ ಪ್ರತ್ಯಕ್ಷದರ್ಶಿಗಳು ಸಂಬಂಧಿಸಿದಕರಿಂದ ಮಾಹಿತಿ ಪಡೆದು ಸ್ಥಳೀಯ ಸಿಸಿಟಿವಿ ಕ್ಯಾಮಾರಾಗಳನ್ನು ಪರಿಶೀಲನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದರು.


ಕೊಲೆ ಕೃತ್ಯ ನಡೆಸಿದ ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಅದಷ್ಟು ಬೇಗ ಆರೋಪಗಳನ್ನು ಬಂಧಿಸಲಾಗುವುದು ಎಂದರು.
ಸಹೋದರಿ ಹೇಳಿಕೆ:
ರೇಖಾ ಅವರ ಕೊಲೆಯನ್ನು ಕಂಡ ಪ್ರತ್ಯಕ್ಷದರ್ಶಿಯೊಬ್ಬರು ನಿಮ್ಮ ತಮ್ಮನ ಪತ್ನಿಯನ್ನು ಕೊಲೆಮಾಡಿದ್ದಾರೆ ಎಂದು ಹೇಳಿದರು ನಾನು ಮನೆಯಿಂದ ಓಡಿ ಬಂದೆ. ನಾನು ನೋಡಿದ್ದಾಗ ಕೆಳಗಡೆ ಬಿದ್ದಿದ್ದರು ಸ್ಟೀಫನ್, ರಾಬರ್ಟ್ ಎಲ್ಲಾ ಜತೆಗೇ ಇದ್ದರು. ಅವರಿಂದ ಯಾವುದೇ ಗಲಾಟೆ ಇರಲಿಲ್ಲ ಎಂದು ಕದಿರೇಶ್ ಸಹೋದರಿ ಹೇಳಿಕೆ ನೀಡಿದ್ದಾರೆ.
ಅಣ್ಣ ನ ಕೊಲೆಯನ್ನು ಕಂಡಿದ್ದ ನನಗೆ ಅತ್ತಿಗೆ ಕೊಲೆಯ ಕೊಲೆಯನ್ನು ಕಾಣಬೇಕಾದ ದೌಭಾರ್ಗ್ಯ ಬಂದಿದೆ ಕೊಲೆಗಾರರನ್ನು ಸುಮ್ಮನೆ ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕದಿರೇಶ್ ಕೊಲೆ:
ಕಳೆದ ೨೦೧೮ರ ಫೆಬ್ರವರಿ ೮ರಂದು ರೇಖಾ ಪತಿ ಕದಿರೇಶ್ ನನ್ನು ಮುನೇಶ್ವರ ದೇವಸ್ಥಾನದ ಬಳಿ ಶೋಭನ್ ಗ್ಯಾಂಗ್ ಸಹಚರರು, ಕೊಚ್ಚಿ ಕೊಲೆ ಮಾಡಿದ್ದರು. ಕದಿರೇಶ್ ಕೊಲೆ ಮಾಡಿದ್ದ ಆರೋಪಿಗಳು ತಾವೇ ನ್ಯಾಯಾಲಯಕ್ಕೆ ಶರಣಾಗಿದ್ದರು. ಸಹೋದರರಾದ ನವೀನ್, ವಿನಯ್ ತಲೆ ಬೋಳಿಸಿಕೊಂಡು ವಕೀಲರ ವೇಷದಲ್ಲಿ ಹಾಜರಾಗಿದ್ದರು. ಕದಿರೇಶ್ ನನ್ನು ಕೊಂದಿದ್ದು ನಾವೇ ಎಂದು ಜಡ್ಜ್ ಎದುರು ತಪ್ಪೊಪ್ಪಿಕೊಂಡಿದ್ದರು.ಮುನೇಶ್ವರ ದೇವಾಲಯದ ಬಳಿ ನಾಲ್ವರು ಸೇರಿ ಕದಿರೇಶ್ ಕೊಲೆ ಮಾಡಿದ್ದರು.

ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ರೇಖಾ ಕದಿರೇಶ್ ಅವರ ಹತ್ಯೆಯ ಆರೋಪಿಗಳನ್ನು ಇನ್ನು ೨೪ ಗಂಟೆಗಳಲ್ಲಿ ಬಂಧಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಂಗಳೂರು ಉಪ ನಗರ ರೈಲು ಯೋಜನೆಯ ಪ್ರಗತಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೊಲೆ ಪ್ರಕರಣದ ಬಗ್ಗೆ ಬೆಳಿಗ್ಗೆಯೇ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಆರೋಪಿಗಳನ್ನು ೨೪ ಗಂಟೆಯಲ್ಲಿ ಬಂಧಿಸುವಂತೆ ಹೇಳಿದ್ದೇನೆ ಎಂದರು.
ಈಗ ಕೊಲೆಯಾಗಿರುವ ರೇಖಾ ಕದಿರೇಶ್ ಅವರ ಪತಿಯನ್ನು ಕೊಲೆ ಮಾಡಲಾಗಿತ್ತು. ಎಲ್ಲದರ ಬಗ್ಗೆಯೂ ಬಿಗಿ ಕ್ರಮಕೈಗೊಳ್ಳುತ್ತೇವೆ ಎಂದರು.