ಹಾಡು ಹಗಲೇ ಯುವಕನ ಕೊಲೆಗೆ ಯತ್ನ: ಇಬ್ಬರು ಆರೋಪಿಗಳ ಬಂಧನ

ಕಲಬುರಗಿ,ಜು.13-ಇತ್ತೀಚೆಗೆ ಇಕ್ಬಾಲ್ ಕಾಲೋನಿಯಲ್ಲಿ ಹಾಡುಹಗಲೇ ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ.
ಇಕ್ಬಾಲ್ ಕಾಲೋನಿಯ ಮಹ್ಮದ್ ಹಸನ್ ತಂದೆ ಮಹಿಬೂಬ್ ಡಾಂಗೆ ಎಂಬ ಯುವಕನನ್ನು ಹಣಕಾಸಿನ ವಿಷಯಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಲಾಗಿತ್ತು. ಈ ಸಂಬಂಧ ಯುವಕನ ತಂದೆ ಮಹಿಬೂಬ್ ಡಾಂಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ನಗರ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ದಕ್ಷಿಣ ಉಪ-ವಿಭಾಗದ ಎಸಿಪಿ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿಐ ಶಿವಾನಂದ ಎ.ಗಾಣಗೇರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿಕ್ರೇಶ್ವರ, ಮುಜಾಹಿದ ಕೊತ್ವಾಲ್, ಶರಣಬಸವ ಅವರು ತನಿಖೆ ನಡೆಸಿ ಇಕ್ಬಾಲ್ ಕಾಲೋನಿಯ ಶೇಖ್ ಮುಬಿನ್ (19) ಮತ್ತು ಎಂ.ಎಸ್.ಕೆ.ಮಿಲ್. ಮಿಸ್ಬಾ ನಗರದ ಮಹ್ಮದ್ ಇರ್ಫಾನ್ (20) ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕು ಜಪ್ತಿ ಮಾಡಿದ್ದಾರೆ.
ಮಹ್ಮದ್ ಹಸನ್ ತೆಗೆದುಕೊಂಡ ಹಣ ವಾಪಸ್ ಕೊಡದೆ ಅವಾಚ್ಯವಾಗಿ ಬೈಯ್ದಿದ್ದರಿಂದ ಚಾಕುವಿನಿಂದ ಇರಿದು ಆತನ ಕೊಲೆಗೆ ಯತ್ನಿಸಲಾಗಿದೆ ಎಂದು ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.