ಹಾಡಿನೊಂದಿಗೆ ಪುರುಷೋತ್ತಮ ಪೂರ್ಣ

ಗಂಡ ಹೆಂಡತಿ ಜಗಳ ಉಂಟು  ಮಲಗಾ ತನಕ ಕೋಪ ತಾಪ ಎಲ್ಲಾ ಸಾರಿ ಎನ್ನೋ ತನಕ..”

ಜಿಮ್ ರವಿ ಮತ್ತು ಅವರ ಮದಡಿ ಜ್ಯೋತಿ ರವಿ ಬರೆದಿರುವ ಹಾಡಿನ ಚಿತ್ರೀಕರಣದೊಂದಿಗೆ “ಪುರುಷೋತ್ತಮ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಎರಡು ಮೂರು ದಶಕಗಳ ಕಾಲ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಜಿಮ್ ರವಿ ಅವರು ಚೊಚ್ಚಲ ಬಾರಿಗೆ ನಾಯಕನಾಗಿ ನಿರ್ಮಾಣ ಮಾಡಿರುವ ಚಿತ್ರ ಇದಾಗಿದೆ.

ನಾಯಕಿ ಅಪೂರ್ವ ಮತ್ತು ನಾಯಕ ಜಿಮ್ ರವಿ  ಹಾಗು ಸಹ ಕಲಾವಿದರು ಪಾಲ್ಗೊಂಡಿದ್ದ ಹಾಡಿನ ಸನ್ನಿವೇಶದ ಮೂಲಕ ಸಮಾಜಕ್ಕೊಂದು ಸಂದೇಶ ನೀಡಲು ಮುಂದಾಗಿದ್ಧಾರೆ. ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಇರಬೇಕು.ನಾನು ಮತ್ತು ನನ್ನ ಪತ್ನಿ ಇದೇ ಸಿದ್ದಾಂತವನ್ನು ಅಳವಡಿಸಿಕೊಂಡಿದ್ದೇವೆ. ಜೊತೆಗೆ ಹಾಡು ಕೂಡ ಬರೆದಿದ್ದೇವೆ ಎಂದರು ನಟ,ನಿರ್ಮಾಪಕ ಜಿಮ್ ರವಿ.

ಶ್ರೀಧರ್ ಸಂಭ್ರಮ್ ಅವರು ಸಂಗೀತ ನೀಡಿರುವ ಈ ಗೀತೆಗೆ ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ ಹಾಡನ್ನು ಮೈಸೂರಿನಲ್ಲಿ ಚಿತ್ರೀಕರಣ ಮಾಡುವದರೊಂದಿಗೆ ಕುಂಬಳಕಾಯಿ ಹೊಡೆಯಲಾಗಿದೆ. ಚಿತ್ರವನ್ನು ಸರಿ ಸುಮಾರು 62 ದಿನಗಳ ಕಾಲ ಮೈಸೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ ಎನ್ನುವ ವಿವರಣೆ ಅವರದು. ಚಿತ್ರಕ್ಕೆ ಎಸ್.ವಿ ಅಮರ್ ನಾತ್ ಆಕ್ಷನ್ ಕಟ್ ಹೇಳಿದ್ಧಾರೆ.

ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಈಗಾಗಲೇ ಚಿತ್ರದ ಎಡಿಟಿಂಗ್ ಕೂಡ ಮುಗಿದಿದೆ. ಹಾಡನ್ನು ಜೋಡಿಸಿದ ಬಳಿಕ ಡಬ್ಬಿಂಗ್ ಸೇರಿದಂತೆ ರೀರಾಕಾಡಿಂಗ್ ಮಾಡುವ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಚಿತ್ರ ಅದ್ದೂರಿಯಾಗಿ ಮತ್ತು ಶ್ರೀಮಂತಿಕೆಯಿಂದ ಮೂಡಿ ಬಂದಿದೆ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ರವಿ ಅವರದು.

ಡಬ್ಬಿಂಗ್ ಕಾರ್ಯ ಮುಗಿಯುವ ವೇಳೆಗೆ ಇನ್ನೂ ಒಂದೂವರೆ ತಿಂಗಳು ಆಗಬಹುದು ಅಷ್ಟರ ವೇಳೆಗೆ ಎಲ್ಲಾ ಕೆಸಲ ಮುಗಿಸಿ ಪ್ರಥಮ ಪ್ರತಿ ತೆಗೆಯಲಾಗುವುದು ಎಂದು ಹೇಳಿಕೊಂಡರು.ಚಿತ್ರದಲ್ಲಿ ಮೈಸೂರು ಪ್ರಭೂ, ಕ್ರಿಸ್ಟೋಫರ್ ಸೇರಿದಂತೆ ರಂಗಭೂಮಿಯ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿಬರಬೇಕು ಎನ್ನುವ ಕಾರಣಕ್ಕೆ ಎಲ್ಲಿಯೂ ಕೂಡ ರಾಜಿ ಮಾಡಿಕೊಂಡಿಲ್ಲ ಎಂದು ಮಾಹಿತಿ ನೀಡಿದರು.