ಹಾಗಲಕಾಯಿಯ ಉಪಯೋಗಗಳು

ಹಾಗಲಕಾಯಿ ಎಲ್ಲಾ ರೋಗಗಳಿಗೂ ಮದ್ದು ಹಾಗೂ ಎಲ್ಲರ ಬಂಧು. ಇದರಲ್ಲಿ ಎರಡು ವಿಧಗಳಿವೆ. ಕಪ್ಪುಹಾಗಲಕಾಯಿ ಹಾಗೂ ಬಿಳಿಹಾಗಲಕಾಯಿ ಎಂದು. ಬಿಳಿಹಾಗಲಕಾಯಿಯಲ್ಲಿ ಔಷಧೀಯ ಗುಣಗಳು ಅಧಿಕವಾಗಿವೆ. ಹಾಗಲಕಾಯಿಯನ್ನು ಆಗಾಗ ತಮ್ಮ ಅಡುಗೆಯಲ್ಲಿ ಗೊಜ್ಜು, ಪಲ್ಯ, ಇತ್ಯಾದಿ ರೂಪದಲ್ಲಿ ಉಪಯೋಗಿಸುತ್ತಾರೆ. ಇದರಲ್ಲಿ ತೇವಾಂಶ, ಸಸಾರಜನಕ, ಪಿಷ್ಠ, ಕ್ಯಾಲ್ಸಿಯಂ, ಕಬ್ಬಿಣ, ಖನಿಜಾಂಶ, ನಾರಿನಾಂಶ, ಕಾರ್ಬೋಹೈಡ್ರೈಡ್, ಮ್ಯಾಂಗನೀಸ್, ಸೋಡಿಯಂ, ಕಾಪರ್, ಗಂಧಕ ಹಾಗೂ ಎ, ಬಿ, ಬಿ೨, ಸಿ, ಜೀವಸತ್ವಗಳು ಹೇರಳವಾಗಿ ಇವೆ. ಇದು ಶೀತಗುಣವುಳ್ಳದ್ದಾಗಿದ್ದು, ಬೇಗನೆ ಪಚನವಾಗುವುದು. ಇದು ರುಚಿಯಲ್ಲಿ ಕಹಿಯಾದರೂ ಶರೀರದ ಒಳಗೆ ಸೇರಿದ ಮೇಲೆ ಸಾಕಷ್ಟು ಸಹಾಯವಾಗುತ್ತದೆ. ಇದರಲ್ಲಿ ಜ್ವರ, ಪಿತ್ತ, ಕಫ, ಕೆಮ್ಮು, ದಮ್ಮು, ಉದರ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಕಣ್ಣುಗಳಿಗೆ ತಂಪನ್ನುಂಟು ಮಾಡುತ್ತದೆ. ಅತಿಸಾರ, ಕಫ, ಮೂಲವ್ಯಾಧಿ ಹಾಗೂ ಕ್ರಿಮಿರೋಗಗಳಿಗೆ ಒಳ್ಳೆಯ ಲಾಭಕರವಾದದ್ದು. ಇದರ ಎಲೆಯಲ್ಲಿ ಔಷಧೀಯ ಗುಣವಿದೆ.
೧. ಕಾಲರಾ: ಹಾಗಲಕಾಯಿ ಮತ್ತು ಈರುಳ್ಳಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಜಜ್ಜಿ ರಸ ತೆಗೆದು, ಈ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಗುಣಕಾಣಬಹುದು. ಇದನ್ನು ಪ್ರತಿ ಅರ್ಧಗಂಟೆಗೊಮ್ಮೆ ಒಂದೊಂದು ಚಮಚ ಕುಡಿಯುತ್ತಿದ್ದರೆ, ರೋಗಿಗಳು ಬಹಳ ಬೇಗ ಚೇತರಿಸಿಕೊಳ್ಳುತ್ತಾರೆ.
೨. ಗಜಕರ್ಣ, ಇಸುಬು, ತುರಿಕೆ, ಚರ್ಮದ ಸಮಸ್ಯೆ: ಮೇಲಿನ ಎಲ್ಲಾ ಸಮಸ್ಯೆಗಳಿಗೂ ಹಾಗಲಕಾಯಿ ರಸ, ಬೇವಿನ ಎಲೆ ರಸ ಹಾಗೂ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಒಲೆಯ ಮೇಲಿಟ್ಟು ನೀರಿನಂಶ ಹೋದಮೇಲೆ ಎಣ್ಣೆಯನ್ನು ಶೇಖರಿಸಿಟ್ಟು, ಯಾವುದೇ ಚರ್ಮದ ಸಮಸ್ಯೆಗಳು ಬಂದಾಗ, ಹಚ್ಚಿದರೆ ದಿವ್ಯ ಔಷಧಯಾಗಿ ಕೆಲಸ ಮಾಡುತ್ತದೆ.
೩. ರಕ್ತಮೂಲವ್ಯಾಧಿ: ಹಾಗಲಕಾಯಿ ಅಥವಾ ಹಾಗಲಕಾಯಿ ಗಿಡದ ಎಲೆಯ ರಸವನ್ನು ಕಲ್ಲುಸಕ್ಕರೆ ಸೇರಿಸಿ ಬೆಳಿಗ್ಗೆ ೭ ದಿನಗಳ ಕಾಲ ಸೇವಿಸುತ್ತಾ ಬಂದರೆ, ರಕ್ತಮೂಲವ್ಯಾಧಿ ಗುಣವಾಗುತ್ತದೆ.
೪. ಯಕೃತ್ (ಲಿವರ್) ಸಮಸ್ಯೆಗೆ: ಹಾಗಲಕಾಯಿಯ ಎಲೆಯ ರಸ ಅಥವಾ ಹಾಗಲಕಾಯಿ ರಸವನ್ನು ಜೇನುತುಪ್ಪದೊಡನೆ ಬೆರೆಸಿ ಸೇವಿಸಿದರೆ ಲಿವರ್ ಸಮಸ್ಯೆ ನಿವಾರಣೆಯಾಗುತ್ತದೆ.
೫. ಹಾವು ಕಚ್ಚಿದರೆ: ಹಾವು ಕಡಿದ ತಕ್ಷಣ ಹಾಗಲಕಾಯಿ ರಸತೆಗೆದು ಕುಡಿಸಿದರೆ, ವಾಂತಿಯಾಗಿ ವಿಷವೆಲ್ಲಾ ಹೊರಗೆಹೋಗಿ ಅನುಕೂಲವಾಗುತ್ತದೆ.
೬. ರಕ್ತ ಹೋಗುತ್ತಿದ್ದರೆ: ಚಾಕು, ಈಳಿಗೆಮಣೆ, ಕತ್ತಿ, ಇಂತಹದ್ದರಿಂದ ಗಾಯವಾಗಿ ರಕ್ತ ಬರುತ್ತಿದ್ದರೆ, ಹಾಗಲಕಾಯಿ ರಸ ಅಥವಾ ಎಲೆಯ ರಸ ತೆಗೆದು ಸ್ವಲ್ಪ ಸುಣ್ಣ ಸೇರಿಸಿ ಹಚ್ಚುವುದರಿಂದ ರಕ್ತವು ಕೂಡಲೇ ನಿಂತುಹೋಗುತ್ತದೆ. ಕಬ್ಬಿಣ ತಗುಲಿದಾಗ ಆಗುವಂತಹ ನಂಜಿಗೂ ಒಳ್ಳೆಯದು.
೭. ಪಿತ್ತದ ಗಂಧೆಗೆ: ಕಡಲೆಕಾಯಿ ಜಾಸ್ತಿ ತಿಂದಾಗ ಅಥವಾ ಪಿತ್ತದ ಪ್ರಕೋಶದಿಂದ ಮೈ ಮೇಲೆ ಕೆಂಪಾಗಿ ಗಂಧೆಗಳು ಆಗುವುದು. ಹಾಗಲಕಾಯಿ ಅಥವಾ ಎಲೆಯ ರಸವನ್ನು ತೆಗೆದು ಮೊಸರಿನೊಂದಿಗೆ ಅರೆದು ಮೈಮೇಲೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿ. ಆಗ ಪಿತ್ತದ ಗಂಧೆಗಳು ಮಾಯವಾಗುತ್ತವೆ. ಅದೇ ಸಮಯದಲ್ಲಿ ಹಾಗಲಕಾಯಿಯ ಎಲೆಯ ರಸವನ್ನು ಹೊಟ್ಟೆಗೆ ಸೇವಿಸುವುದರಿಂದ ಬಹಳ ಬೇಗ ಪಿತ್ತವು ಶಾಂತವಾಗುವುದು.
೮. ರಕ್ತಶುದ್ಧಿ: ಹಾಗಲಕಾಯಿಯನ್ನು ಸೇವಿಸುವುದರಿಂದ ರಕ್ತಶುದ್ಧಿಯಾಗುತ್ತದೆ. ಕರಳುಹುಣ್ಣಿಗೆ, ಹೊಟ್ಟೆಹುಣ್ಣಿಗೆ, ಮುಟ್ಟಿನ ದೋಷಗಳಿಗೆ ಬಹಳ ಒಳ್ಳೆಯದು.
೯. ಚರ್ಮರೋಗಗಳಿಗೆ: ಹಾಗಲಕಾಯಿ, ದೊಡ್ಡಪತ್ರೆ, ಅರಿಶಿನ ಇವನ್ನು ಮೊಸರು ಅಥವಾ ಗೋಮೂತ್ರದಲ್ಲಿ ಅರೆದು ಹುಳಕಡ್ಡಿ, ಎಕ್ಸಿಮಾ, ತುರಿಕೆ, ನೆವೆ ಎಲ್ಲದಕ್ಕೂ ಹಚ್ಚಿದರೆ ಗುಣಮುಖವಾಗುವುದು.
೧೦. ವಿಷಪ್ರಾಶನ: ವಿಷಪ್ರಾಶನವಾಗಿದ್ದಾಗ ಹಾಗಲಕಾಯಿ ರಸ ತೆಗೆದು ತಕ್ಷಣ ಕುಡಿಸಿದರೆ ವಿಷವೆಲ್ಲವೂ ವಾಂತಿಯಾಗಿ ತಕ್ಷಣ ಚೇತರಿಸಿಕೊಳ್ಳಲು ಸಹಾಯಕವಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧