
ಹಾಗಲಕಾಯಿ ಹಲವು ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮವಾಗಿದೆ. ಪ್ರಮುಖವಾಗಿ ಇದರ ನಿಯಮಿತ ಸೇವನೆಯಿಂದ ಯಕೃತ್‌ನಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ. ಇದರ ನಿಯಮಿತ ಸೇವನೆಯಿಂದ ಮುಖದ ಮೊಡವೆಗಳೂ ಕಲೆ ನೀಡದೇ ಮಾಗಲು ಸಾಧ್ಯವಾಗುತ್ತದೆ.
ಟೈಪ್ ೨ ಮಧುಮೇಹವನ್ನು ಗುಣಪಡಿಸಲು ಸಮರ್ಥವಿರುವ ಸಿದ್ಧ ಆಹಾರವೆಂದರೆ ಅದು ಪ್ರಥಮವಾಗಿ ಹಾಗಲಕಾಯಿ, ಆದರೆ ಇದರ ಕಹಿರುಚಿಯನ್ನು ಸಹಿಸುವ ಮನಸ್ಸಾಗಬೇಕು ಅಷ್ಟೇ. ಹಾಗಲಕಾಯಿಯನ್ನು ತರಕಾರಿಯ ರೂಪದಲ್ಲಿ ಸೇವಿಸುವುದಕ್ಕಿಂತ ಹೆಚ್ಚು ಪರಿಣಾಮವನ್ನು ಅದರ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ಪಡೆಯಬಹುದು.
ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ತಗ್ಗಿಸುತ್ತದೆ
ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಗಲಕಾಯಿಯ ರಸವನ್ನು ಖಾಲಿಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ವಾಸ್ತವಾಗಿ ರಕ್ತದಲ್ಲಿನ ಸಕ್ಕರೆ ಉಪಯೋಗಿಸಲ್ಪಡದೇ ವಿಸರ್ಜಿಸಲಾಗಲು ಇನ್ಸುಲಿನ್ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ. ಈ ಪೋಷಕಾಂಶಗಳು ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುವುದೇ ಹಾಗಲಕಾಯಿಯ ಈ ಸಾಮರ್ಥ್ಯಕ್ಕೆ ಕಾರಣವಾಗಿದೆ.
ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ: ಕೆಲವೊಮ್ಮೆ ಆಹಾರ ಜೀರ್ಣಗೊಳ್ಳಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುವುದರಿಂದ ಹೊಟ್ಟೆಯಲ್ಲಿಯೇ ಉಳಿದು ಹಲವು ವಾಯುಗಳು ಉತ್ಪತ್ತಿಯಾಗಿ ಉರಿ ತರಿಸುತ್ತವೆ. ಅಜೀರ್ಣ ವ್ಯಾಧಿ ಎಂದು ಕರೆಯಲಾಗುವ ಈ ತೊಂದರೆಗೆ ಹಾಗಲಕಾಯಿಯ ರಸ ಅತ್ಯಂತ ಪರಿಣಾಮಕಾರಿಯಾಗಿದೆ. ಈ ರಸ ಹೊಟ್ಟೆಯಲ್ಲಿಳಿದ ಬಳಿಕ ಜೀರ್ಣರಸಗಳನ್ನು ಅಗತ್ಯ ಪ್ರಮಾಣದಲ್ಲಿ ಸ್ರವಿಸಲು ಜಠರಕ್ಕೆ ಪ್ರಚೋದನೆ ನೀಡುತ್ತದೆ. ಪರಿಣಾಮವಾಗಿ ಹುಳಿತೇಗು, ಗ್ಯಾಸ್ಟ್ರಿಕ್, ಹೊಟ್ಟೆಯ ಹುಣ್ಣು ಮೊದಲಾದ ತೊಂದರೆಗಳಿಂದ ಕಾಪಾಡಿದಂತಾಗುತ್ತದೆ. ವಾರಕ್ಕೊಮ್ಮೆ ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿಯ ರಸವನ್ನು ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ.
ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ: ಹಾಗಲಕಾಯಿಯ ರಸದಲ್ಲಿ ಬೀಟಾ-ಕ್ಯಾರೋಟೀನ್ ಮತ್ತು ವಿಟಮಿನ್ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡಿದಂತಾಗುತ್ತದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ಮಧುಮೇಹದ ಕಾರಣದಿಂದಾಗಿ ಉತ್ಪತ್ತಿಯಾಗುವ ದೃಷ್ಟಿದೋಷದಿಂದ ಕಣ್ಣುಗಳನ್ನು ಕಾಪಾಡುತ್ತವೆ. ಹಾಗಲಕಾಯಿಯ ನಿಯಮಿತ ಸೇವನೆಯಿಂದ ಕಣ್ಣುಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆ: ಹಾಗಲಕಾಯಿಯಲ್ಲಿ ಫೈಟೋನ್ಯೂಟ್ರಿಯೆಂಟ್‌ಗಳೆಂಬ ಆಂಟಿ ಆಕ್ಸಿಡೆಂಟುಗಳಿದ್ದು ಇವು ಕೆಟ್ಟ ಕೊಲೆಸ್ಟಾಲ್ ಕಣಗಳನ್ನು ತಮ್ಮೊಂದಿಗೆ ಅಂಟಿಸಿಕೊಂಡು ಹೋಗುವ ಕ್ಷಮತೆ ಪಡೆದಿವೆ. ಹಾಗಲಕಾಯಿಯನ್ನು ತರಕಾರಿಯ ರೂಪದಲ್ಲಿ ಆಲಿವ್ ಎಣ್ಣೆಯೊಡನೆ ಸೇವಿಸಿದರೆ ಕೊಂಚ ಕಹಿ ಎನಿಸಿದರೂ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.
ರಕ್ತವನ್ನು ಶುದ್ಧೀಕರಿಸುತ್ತದೆ: ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ರಸವನ್ನು ಸೇವಿಸುವುದರಿಂದ ರಕ್ತ ಶುದ್ಧಿಗೊಂಡು ಚರ್ಮದ ವಿವಿಧ ತೊಂದರೆಗಳು ಮಾಯವಾಗಿ ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯವಾಗುತ್ತದೆ. ಶುದ್ದೀಕರಣಗೊಂಡ ರಕ್ತದ ಮೂಲಕ ಇಡಿಯ ಶರೀರ ಆರೋಗ್ಯದಿಂದ ಕಂಗೊಳಿಸುತ್ತದೆ.
ಮೊಡವೆಗಳಿಗೆ: ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ ೬ ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.
ಹಾಗಲಕಾಯಿ ಜ್ಯೂಸ್ ಮಾಡುವ ವಿಧಾನ: ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ. ಸಿಪ್ಪೆಯ ಕಹಿಯನ್ನು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ. ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ ೩೦ ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ. ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ. ಅನ೦ತರ ಇವುಗಳನ್ನು ಮಿಕ್ಸರ್ ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ.