ಹಾಕಿ ಮಾಂತ್ರಿಕ ಧ್ಯಾನಚಂದ್ ಕ್ರೀಡಾಕ್ಷೇತ್ರದ ಧೃವತಾರೆ

ಕೋಲಾರ,ಆ,೨೯- ಹಾಕಿ ಮಾಂತ್ರಿಕ ಧ್ಯಾನಚಂದ್‌ರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಕ್ರೀಡಾದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದ್ದು, ಅವರು ಕ್ರೀಡಾ ಕ್ಷೇತ್ರದ ಧೃವತಾರೆಯಾಗಿ ಬೆಳಗಿದವರು ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಿದ್ದೇಶ್ವರಿ ತಿಳಿಸಿದರು.
ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾದಿನಾಚರಣೆ ಅಂಗವಾಗಿ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕ್ರೀಡೆಗಳೂ ಸಹಾ ಪಠ್ಯದಷ್ಟೇ ಪ್ರಾಮುಖ್ಯತೆ ಗಳಿಸಿವೆ, ಸಾಧನೆಯ ಛಲ ಇದ್ದರೆ ಪಠ್ಯಕ್ಕಿಂತಲೂ ಬೇಗ ವಿಶ್ವಮೆಚ್ಚುವ ಸಾಧಕರಾಗಿ ಹೊರಹೊಮ್ಮಬಹುದು ಎಂದು ತಿಳಿಸಿದರು.
ಹಾಕಿ ಮಾಂತ್ರಿಕ ಧ್ಯಾನಚಂದ್ ನೆನಪಿನಲ್ಲಿ ದೇಶಾದ್ಯಂತ ಕ್ರೀಡಾದಿನಾಚರಣೆ ಆಚರಿಸುತ್ತಿರುವುದು ಸ್ವಾಗತಾರ್ಹ, ಅವರ ನೆನಪು ಸದಾ ಉಳಿಯುವಂತೆ ಸರ್ಕಾರ ಯಾವುದಾದರೂ ಸ್ಮರಣೀಯ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಕೋಲಾರ ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಮಾನ್ಯತೆ ಗಳಿಸಿದೆ, ಅದನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಿಗೆ ಆದ್ಯತೆ ನೀಡಬೇಕು, ನಿರಂತರ ವ್ಯಾಯಾಮ, ಅಭ್ಯಾಸದ ಮೂಲಕ ಕ್ರೀಡಾಸಾಧಕರಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಯುವಜನತೆ, ವಿದ್ಯಾರ್ಥಿಗಳು ಇಂದು ಹಾಕಿಯನ್ನು ಮರೆಯುತ್ತಿದ್ದೇವೆ, ಕೇವಲ ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರವಲ್ಲ ಎಂಬ ಸತ್ಯ ಅರಿಯಬೇಕು, ಕ್ರೀಡಾ ಸಾಧನೆಗೆ ಯಾವುದಾದರೂ ಕ್ರೀಡೆಯನ್ನು ಆರಿಸಿಕೊಳ್ಳಬಹುದು, ಹಾಕಿ ಕಲಿಯುವ ಪ್ರಯತ್ನಕ್ಕೆ ಮುನ್ನುಡಿ ಬರೆಯಬೇಕು ಎಂದರು.
ಶಾಲೆಯ ಮಕ್ಕಳು ಈಗಾಗಲೇ ಹೋಬಳಿ ಹಂತದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದೀರಿ, ತಾಲ್ಲೂಕು ಹಂತ,ಜಿಲ್ಲಾಹಂತದಲ್ಲೂ ಉತ್ತಮ ಸಾಧನೆ ಮಾಡುವ ಶಾಲೆಗೆ ಕೀರ್ತಿ ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ,ಸುಗುಣಾ, ಫರೀದಾ, ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.