ಹಸ್ತರೇಖೆಗಿಂತ ಮಸ್ತಕದ ಜ್ಞಾನವೇ ಲೇಸು: ಸಜ್ಜನಶೆಟ್ಟಿ

ಕಲಬುರಗಿ,ಮೇ.14: ಅಂಗೈಯಲ್ಲಿರುವ ರೇಖೆಗಳು ಹೇಳುವ ಭವಿಷ್ಯಕ್ಕಿಂತ ನಮ್ಮ ಮಸ್ತಕದ ಅಂದರೆ ತಲೆಯಲ್ಲಿರುವ ಜ್ಞಾನವೇ ಲೇಸು ಎಂದು ಶ್ರೀ ಮಠದ ಹಳೆಯ ವಿದ್ಯಾರ್ಥಿ ಮತ್ತು ಕನ್ನಡ ಭಾಷಾ ಶಿಕ್ಷಕ ಸಂಗಮನಾಥ್ ಪಿ ಸಜ್ಜನಶೆಟ್ಟಿ ಅವರು ಹೇಳಿದರು.
ತಾಲ್ಲೂಕಿನ ಹೊನ್ನಕಿರಣಗಿಯ ಶ್ರೀ ರಾಚೋಟೇಶ್ವರ್ ಸಂಸ್ಥಾನ ಮಠದಲ್ಲಿ ನಡೆದ 14 ನೇ ವರ್ಷದ ಪುರಾತನ ಸಂಸ್ಕøತಿ ಉಳಿಸುವ ವೈದಿಕ ಸಂಸ್ಕಾರ ಶಿಬಿರವನ್ನು ಉದ್ದೇಶಿಸಿ ಶಿಬಿರಾರ್ಥಿಗಳಿಗೆ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡ ಅವರು,ತಮ್ಮ ಜ್ಞಾನದ ಶಕ್ತಿಯಿಂದ ಕೈ ಇಲ್ಲದ ಎಷ್ಟೋ ಜನರು ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ, ಆ ಜ್ಞಾನವನ್ನು ನಂಬಿ ಜೀವಿಸಿದರೆ ನಮ್ಮ ಜೀವನ ಯಶಸ್ಸಿನತ್ತ ಸಾಗುತ್ತದೆ, ನನ್ನ ಜೀವನದ ಪ್ರತಿ ಅನ್ನದ ಮೂಲಕ್ಕೆ ಶ್ರೀ ಮಠದ ಸಂಸ್ಕಾರ ಮತ್ತು ಶಿಕ್ಷಣವೇ ಕಾರಣವಾಗಿದೆ, ಹಾಗಾಗಿ ತಾವೆಲ್ಲರೂ ಶ್ರೀ ಮಠದ ಮತ್ತು ಪೂಜ್ಯ ಗುರುಗಳಾದ ಚಂದ್ರಗುಂಡ ಶಿವಾಚಾರ್ಯರ ಆರ್ಶಿವಾದದಿಂದ ಉತ್ತಮ ಸಂಸ್ಕಾರ ಮತ್ತು ಶಿಕ್ಷಣದ ಜ್ಞಾನವನ್ನು ಪಡೆದು ಜೀವನದಲ್ಲಿ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ರಾಚೋಟೇಶ್ವರ್ ಸಂಸ್ಥಾನ ಮಠದ ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಗೋಪೂಜೆ ನಮ್ಮ ಸಂಸೃತಿಯ ಹೆಮ್ಮೆಯಾಗಿದೆ, ಗೋವಿಗೆ ಸಾವಿರಾರು ರೋಗಗಳನ್ನು ನಿವಾರಣೆ ಮಾಡುವ ಶಕ್ತಿಯಿದೆ, ಈ ಗೋವಿನಿಂದ ಮಾನವ ಜನ್ಮಕ್ಕೆ ಆಗುವ ಲಾಭಗಳು ಎಣಿಕೆಗೆ ಸಾಲದು, ಅಲ್ಲದೇ ಶಿವನ ಪಂಚಮುಖದ ಪಂಚವರ್ಣ ಗೋವುಗಳಾದ ನಂದಾ, ಭದ್ರ, ಸುರಭಿ, ಸುಶೀಲ, ಸುಮನ ಮೊದಲಾದ ಗೋವುಗಳ ಪ್ರಯೋಜನೆಗಳು ಹಾಗೂ ಕಲ್ಪ ಭಸ್ಮ ತಯಾರಿಕೆ ಮತ್ತು ಅದನ್ನು ಹೇಗೆ ಧಾರಣೆ ಮಾಡಬೇಕು ಮುಂತಾದ ವಿಷಯಗಳ ಕುರಿತು ಶಿಬಿರಾರ್ಥಿಗಳಿಗೆ ಸಂಸ್ಕಾರ ದೀಕ್ಷೆಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಹಾಗೂ ಗ್ರಾಮದ ಹಿರಿಯ ಮುಖಂಡ ಭಗವಂತರಾಯ್ ಕಾಬಾ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ವೀರಣ್ಣ ಯನಗುಂಟಿ, ಶಿವಕುಮಾರ್ ತುಪ್ಪದ್, ಶಾಂತಯ್ಯ ಡೆಂಗಿಮಠ್, ರಾಮು ಪುಲಾರಿ ಮುಂತಾದವರು ಉಪಸ್ಥಿತರಿದ್ದರು. ರೇವಣಸಿದ್ದಯ್ಯ ಸಿಂದಗಿ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಕಾನಾಗಡ್ಡಾ, ನಾಗಯ್ಯ ಬಣಮಗಿ ಅವರು ಪ್ರಾರ್ಥನಾಗೀತೆ ಹಾಡಿದರು. ಮಹಾಂತಯ್ಯ ಬೈರಾಮಡಗಿ ಮತ್ತು ಮಲ್ಲಯ್ಯ ಬಬಲಾದ್ ಅವರು ವೇದ ಘೋಷ ಹೇಳಿದರು. ಗಣೇಶ್ ಹುಮ್ನಾಬಾದ್ ಅವರು ಸ್ವಾಗತಿಸಿದರು. ಚಾಚಯ್ಯ ತಿಂಥಣಿ ಅವರು ಮಹಾ ಮಂಗಲಾರತಿ ಮಾಡಿದರು. ವಿಕಾಸ್ ಚಟ್ನಳ್ಳಿ ಅವರು ವಂದಿಸಿದರು.