ಹಸು ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ:ಶಸ್ತ್ರಚಿಕಿತ್ಸೆ ಯಶಸ್ವಿ

ಕೋಲಾರ, ಏ. ೧೭- ಸುಮಾರು ಎರಡು ವರ್ಷಗಳಿಂದಲೂ ಸುಮಾರು ೧೫ ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊಟ್ಟೆಯಲ್ಲಿಟ್ಟುಕೊಂಡು ಅಚ್ಚರಿಯಾಗಿ ಬದುಕಿದ್ದ ಹಸುವೊಂದಕ್ಕೆ ನಗರದಲ್ಲಿ ಪಶು ವೈದ್ಯರು ಯಶಸ್ವಿ ಚಿಕಿತ್ಸೆ ಮಾಡಿ ಹಸುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರದ ನಗರದಲ್ಲಿ ವಿದೇಶಿ ಎಚ್‌ಎಫ್ ತಳಿಯ ಹಸುವೊಂದು ದಿಢೀರನೇ ಮೇವು ತಿನ್ನುವುದು ನಿಲ್ಲಿಸಿ ಹಾಲು ಇಳುವರಿಯನ್ನು ಕಡಿತಗೊಳಿಸಿತ್ತು. ಮೇವು ತಿನ್ನುವುದು ನಿಲ್ಲಿಸಿದ್ದರಿಂದ ಹಸು ಬಡಕಲಾಗುತ್ತಾ ಹೋಯಿತು. ಹೊತ್ತಿಗೆ ಸುಮಾರು ೧೦ ಲೀಟರ್ ಹಾಲು ನೀಡಿದ್ದ ಹಸು ಕೇವ ಮೂರು ನಾಲ್ಕು ಲೀಟರ್ ಹಾಲು ನೀಡಲು ಶುರುವಿಟ್ಟುಕೊಂಡಿತ್ತು.ಹಸು ಸಾಕುತ್ತಿದ್ದ ಮನೆಯವರು ಹಸುವಿಗೆ ಸಾಕಷ್ಟು ಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗಿರಲಿಲ್ಲ.
ಇದೇ ಪರಿಸ್ಥಿತಿ ಕಳೆದರೆ ಹಸು ಪ್ರಾಣ ಕಳೆದುಕೊಳ್ಳುವ ಆತಂಕ ಎದುರಾಗಿತ್ತು.ಇಂತ ಆತಂಕದ ಪರಿಸ್ಥಿತಿಯಲ್ಲಿ ಹಸುವಿನ ನೆರವಿಗೆ ಬಂದವರು ಪಶು ಶಸಚಿಕಿತ್ಸಕ ಡಾ.ರಾಹುಲ್ ಮತ್ತು ಪಶು ವೈದ್ಯಾಧಿಕಾರಿ ಡಾ.ರಘುನಾಥ್.ತೀರಾ ನಿತ್ರಾಣ ಸ್ಥಿತಿಯಲ್ಲಿದ್ದ ಹಸುವಿಗೆ ಇನ್ಯಾವುದು ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಎಂಬುದನ್ನು ಅರಿತುಕೊಂಡು ಶಸ್ತ್ರಚಿಕಿತ್ಸೆಗೆ ಮುಂದಾದರು. ಬಲಹೀನ ಪರಿಸ್ಥಿತಿಯಲ್ಲಿಯೂ ಹಸು ಶಸ್ತ್ರಚಿಕಿತ್ಸೆಯನ್ನು ತಡೆದುಕೊಂಡಿತ್ತಲ್ಲದೆ ತನ್ನದೇ ಹೊಟ್ಟೆಯಲ್ಲಿ ಸುಮಾರು ಎರಡು ವರ್ಷಗಳಿಂದಲೂ ಸೇರಿಕೊಂಡಿದ್ದ ಸುಮಾರು ೧೫ ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರತೆಗೆಯಲು ಸಹಕರಿಸಿತ್ತು.
ಹಸುಗಳಿಗೆ ಮೇವು ತಿನ್ನಲು ಹೊರಗೆ ಬಿಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಹೊಟ್ಟೆ ಸೇರದಂತೆ ಎಚ್ಚರವಹಿಸುವುದು ಅಗತ್ಯ ಎಂದು ಪಶು ಶಸ್ತ್ರಚಿಕಿತ್ಸಕ ಡಾ.ರಾಹುಲ್ ಮತ್ತು ಡಾ.ರಘುನಾಥ್ ಪಶು ಸಾಕಾಣಿಕೆದಾರರಿಗೆ ಸಲಹೆ ನೀಡಿದ್ದಾರೆ.