ಹಸುಗಳ ನಿರ್ವಹಣೆ:ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು, ಜ. 7- ಕಳ್ಳ ಸಾಗಣೆ ಮತ್ತು ಕಸಾಯಿ ಖಾನೆಗೆ ಕೊಂಡೊಯ್ಯವ ಹಸುಗಳ ವಧೆ ತಡೆದು ವಶಪಡಿಸಿಕೊಂಡು ಗೋವುಗಳನ್ನು ಗೋಶಾಲೆಗಳಿಗೆ ನೀಡಿ ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳುವಂತೆ ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧದ ನಂತರ ಗೋವುಗಳ ನಿರ್ವಹಣೆಗೆ ಅಂದಾಜು ತಗುಲುವ ವೆಚ್ಚ ಮತ್ತು ವ್ಯವಸ್ಥೆಯ ಮಾಹಿತಿಯನ್ನು ಪಡೆದುಕೊಳ್ಳಲಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಗೋಶಾಲೆ ಮತ್ತು ಗೋವುಗಳ ನಿರ್ವಹಣೆಯ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ದೇಸಿ ಹಸುಗಳ ಉತ್ಪನ್ನಗಳ ಬಳಕೆಗೆ ಆದ್ಯತೆ

ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನಲ್ಲದೆ ಗೋವುಗಳ ಸಗಣಿ ಮತ್ತು ಮೂತ್ರದಿಂದ ತಯಾರಾಗುತ್ತಿರುವ ಇತರೇ ಉತ್ಪನ್ನಗಳಾದ ಗೋಭಸ್ಮ, ಸೋಪು, ಶಾಂಪೂ, ಉದಿನಕಡ್ಡಿ, ಪಂಚಗವ್ಯ, ವರ್ಮಿಕಾಂಪೋಸ್ಟ್, ಗೋಅರ್ಕ, ಗೋನಾಯ್ಲ್ , ಕೀಟನಾಶಕ ಇತ್ಯಾದಿಗಳನ್ನು ಸಾರ್ವಜನಿಕರು ಹೆಚ್ಚು ಹೆಚ್ಚು ಬಳಸುವುದರ ಮೂಲಕ ಗೋಸಂರಕ್ಷಣೆಗೆ ಸಹಕರಿಸಬೇಕು ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತೆ ಅಧ್ಯಯನ ಸಹ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಗೋಹತ್ಯೆ ಪ್ರಕರಣ ಕಂಡುಬಂದಲ್ಲಿ ಆಯಾ ಪ್ರದೇಶದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗೆ ದೂರು ನೀಡಲು ಸೂಚಿಸಿದ್ದಾರೆ

ಕಸಾಯಿಖಾನೆಗೆ ಒಯ್ಯುವಾಗ ರಕ್ಷಿಸಲಾದ ಗೋವುಗಳನ್ನು ಸಾಕಲು ಸಾರ್ವಜನಿಕರು ಮುಂದೆ ಬಂದರೆ ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಆರ್ಥಿಕವಾಗಿ ಸಬಲರು, ಆಸಕ್ತರು ಗೋವನ್ನು ಮನೆಯಲ್ಲಿ ಸಾಕಿದರೆ ಸಂರಕ್ಷಣೆಗೆ ಮತ್ತಷ್ಟು ಬಲದೊರೆತಂತಾಗುತ್ತದೆ.
ಗೋವಿನ ಬಗ್ಗೆ ಸಮಾಜದಲ್ಲಿರುವ ಪ್ರೀತಿ, ಶ್ರದ್ಧೆ ಮತ್ತು ಸಂರಕ್ಷಣಾ ಮನೋಭಾವ ದೇಸಿ ಗೋವುಗಳ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದಿದ್ದಾರೆ.