ಹಸುಗಳನ್ನೇಕೆ ಕಡಿಯಬಾರದು: ಸಚಿವ ಕೆ.ವೆಂಕಟೇಶ್

ಮೈಸೂರು: ಎಮ್ಮೆ, ಕೋಣಗಳನ್ನು ಕಡಿದು ಹಾಕುವುದಾದರೇ ಹಸುಗಳನ್ನು ಏಕೆ ಕಡಿಯಬಾರದು? ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್‍ಪ್ರಶ್ನಿಸಿದರು.
ಗೋ ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಯಿಸಿ ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ. ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು. 25 ಮಂದಿ ಬಂದರೂ ಸತ್ತ ಹಸುವಿನ ಮೃತದೇಹ ಎತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಮೃತ ಹಸುವನ್ನು ಎತ್ತಿಸಿ ಗುಂಡಿ ತೋಡಿ ಹೂಳಬೇಕಾಯಿತು. ಹೀಗಾಗಿ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆಂದರು.
ರಾಜ್ಯಕ್ಕೆ ಅಮುಲ್ ಬಂದಿಲ್ಲ. ಅಮುಲ್‍ನಿಂದ ನಂದಿನಿಗೆ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಅಮುಲ್ ಬಂದಾಗ ನೋಡೋಣ. ನಂದಿನಿ ಉತ್ಪನ್ನಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹಸು ದತ್ತು ಯೋಜನೆ ಏನಾಗಿದೆ ಎಂದು ಪರಿಶೀಲಿಸುತ್ತೇವೆ. ಗೋ ಶಾಲೆಗಳ ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ. ಆದರೆ, ನಿರ್ವಹಣೆ ಸರಿಯಾಗಿ ಆಗಿಲ್ಲ. ಮುಂದೆ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮೈಸೂರು-ಚಾಮರಾಜನಗರ ಜಿಲ್ಲೆಯ ಜನರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮೈಸೂರು ರಾಜಕೀಯವಾಗಿ ಮಹತ್ವ ಪಡೆದುಕೊಂಡಿರುವ ಜಿಲ್ಲೆ. ಮೈಸೂರಿನಲ್ಲಿ ರಾಜರು ಆಳ್ವಿಕೆ ಮಾಡಿದ್ದಾರೆ. ಸ್ವಾತಂತ್ರ್ಯ ನಂತರ ದೇವರಾಜ ಅರಸು, ಸಿದ್ಧರಾಮಯ್ಯ ಎರಡು ಬಾರಿ ಸಿಎಂ ಆಗಿದ್ದಾರೆ. ಇದು ಮೈಸೂರು ಜಿಲ್ಲೆಯ ಜನರಿಗೆ ಹೆಮ್ಮೆಯ ವಿಚಾರವಾಗಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗಿದೆ. 2018ರ ಚುನಾವಣೆಗೆ ಹೋಲಿಸಿದರೆ, ಈ ಬಾರಿಯ ಚುನಾವಣೆಯಲ್ಲಿ ಜನರು ಬಹಳ ಎಚ್ಚರಿಕೆಯಿಂದ ಮತ ನೀಡಿದ್ದಾರೆಂದರು.
ಮೈಸೂರು ಜಿಲ್ಲೆಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ಎಲ್ಲರೂ ನಮಗೆ ಸಹಕಾರ ಕೊಡಿ. ನನಗೆ ಕೊಟ್ಟಿರುವ ಪಶು ಸಂಗೋಪನೆ ಇಲಾಖೆ ಬಹುದೊಡ್ಡ ಇಲಾಖೆ. ಮೂಕ ಜೀವಿಗಳ ಒಳಿತಿಗಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಇಲಾಖೆ ದೊಡ್ಡದಿದ್ದರೂ, ನೌಕರರ ಕೊರತೆ ಹೆಚ್ಚಾಗಿದೆ. 18 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳ ಅಗತ್ಯವಿದೆ. ಸದ್ಯಕ್ಕೆ 9 ಸಾವಿರ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು,ಬಾಕಿ ಹುದ್ದೆಗಳು ಖಾಲಿ ಉಳಿದಿವೆ. ಪಶು ವೈದ್ಯರ ಕೊರತೆ ಹೆಚ್ಚಾಗಿದೆ. 4234 ಆಸ್ಪತ್ರೆಗಳಿದ್ದು 1600 ಕ್ಕೂ ಹೆಚ್ಚು ವೈದ್ಯರ ಕೊರತೆಯಿದೆ. ಸದ್ಯದಲ್ಲೇ 400 ಪಶುವೈದ್ಯರ ನೇಮಕಾತಿಗೆ ಕೆಪಿಎಸ್‍ಸಿ ಮೂಲಕ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದರು.
ಸಿಬ್ಬಂದಿಯ ಕೊರತೆಯಿಂದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೈನುಗಾರಿಕೆಯ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹೈನುಗಾರಿಕೆಗೆ ಬಜೆಟ್ ನಲ್ಲಿ ನೀಡುವ ಅನುದಾನ ಕಡಿಮೆಯಿದೆ. ಹೀಗಾಗಿ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡುತ್ತೇನೆಂದು ತಿಳಿಸಿದರು.