ಹಸಿ ಕಸ ಒಣಕಸ ವಿಂಗಡಣೆ ನಿಲ್ಲಿಸದಿದ್ದರೆ ಪ್ರತಿಭಟನೆ: ಬಾವಾ ಎಚ್ಚರಿಕೆ

ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆ ಜಿಲ್ಲೆಯಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವ ಈ ವೇಳೆಯಲ್ಲೂ ತ್ಯಾಜ್ಯವನ್ನು ಹಸಿ ಕಸ ಮತ್ತು ಒಣಕಸ ವಿಂಗಡಣೆ ಮಾಡಿ ಕೊಡಬೇಕೆಂದು ನಾಗರಿಕರಿಗೆ ಒತ್ತಡ ಹೇರುತ್ತಿದ್ದು ನಾಗರಿಕರು ವಿಂಗಡಣೆ ಮಾಡಿ ಕೊಡುತ್ತಿಲ್ಲ ಎಂಬ ನೆಪವೊಡ್ಡಿ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ನಾಗರಿಕರ ಆರೋಗ್ಯ ಹದಗೆಡುವ ಸಾಧ್ಯತೆಯಿದ್ದು ಮನಪಾ ಕೂಡಲೇ ಇಂತಹ ನಿರ್ಧಾರವನ್ನು ಕೈಬಿಡಬೇಕು ಎಂದು ಮಾಜಿ ಶಾಸಕ ಮೊಯಿದೀನ್ ಬಾವಾ ಎಚ್ಚರಿಕೆ ನೀಡಿದ್ದಾರೆ.
ಮನಪಾ ವ್ಯಾಪ್ತಿಯಲ್ಲಿ ಹಸಿಕಸ ಒಣಕಸ ವಿಂಗಡಣೆ ಬಗ್ಗೆ ನಾಗರಿಕರಲ್ಲಿ ಸರಿಯಾಗಿ ಮಾಹಿತಿ ನೀಡದೇ ಏಕಾಏಕಿ ಆದೇಶವನ್ನು ಮೇಯರ್ ಅವರು ಜಾರಿಗೊಳಿಸಿದ್ದಾರೆ. ಜನರು ಕೋವಿಡ್ ನಿಂದಾಗಿ ಸಾಯುತ್ತಿರುವ ಈ ವೇಳೆಯಲ್ಲಿ ಕಸ ವಿಂಗಡಣೆ ಮಾಡಿಲ್ಲ ಎಂದು ತ್ಯಾಜ್ಯವನ್ನು ಕೊಂಡೊಯ್ಯದೆ ಬಿಟ್ಟು ಹೋಗುತ್ತಿರುವ ಘಟನೆಗಳು ನಡೆಯುತ್ತಿವೆ. ಮೇಯರ್ ಅವರು ತಕ್ಷಣವೇ ಎಚ್ಚೆತ್ತು ಇಂತಹ ಆದೇಶವನ್ನು ವಾಪಾಸ್ ಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೊರೋನಾ ಮಧ್ಯೆ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಮಾಜಿ ಶಾಸಕ
ಮೊಯಿದೀನ್ ಬಾವಾ ಎಚ್ಚರಿಕೆ ನೀಡಿದ್ದಾರೆ.
ಮೀನುಗಾರರಿಗೂ ಪ್ಯಾಕೇಜ್ ಘೋಷಿಸಿ
ರಾಜ್ಯ ಸರಕಾರ ಕೊರೋನಾ ಸಂಕಷ್ಟದ ಸಮಯದಲ್ಲಿ ಸಮಾಜದ ಕೆಲವು ವರ್ಗಗಳಿಗೆ ಮಾತ್ರ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕಡಲನ್ನೇ ನಂಬಿ ಜೀವನ ನಡೆಸುತ್ತಿರುವ ಮೀನುಗಾರ ಬಂಧುಗಳಿಗೆ ಮಾತ್ರ ಸರಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೇ ಅನ್ಯಾಯವೆಸಗಿದೆ. ಹೀಗಾಗಿ ಮೀನುಗಾರರಿಗೂ ೧೦ ಸಾವಿರ ರೂ. ಪರಿಹಾರ ಘೋಷಿಸಬೇಕೆಂದು ಮೊಯಿದೀನ್ ಬಾವಾ ಸರಕಾರಕ್ಕೆ ಆಗ್ರಹಿಸಿದ್ದಾರೆ. ಕಲಾವಿದರು ಮತ್ತಿತರರಿಗೆ ಈಗ ಘೋಷಣೆ ಮಾಡಿರುವ ೨, ೩ ಸಾವಿರ ರೂಪಾಯಿ ಪರಿಹಾರ ಯಾವುದಕ್ಕೂ ಸಾಲದಾಗಿದೆ. ಹೀಗಾಗಿ ಅವರಿಗೂ ೧೦ ಸಾವಿರ ಪರಿಹಾರ ನೀಡಬೇಕು, ಕರಾವಳಿಯ ಗಂಡುಕಲೆ ಯಕ್ಷಗಾನ ಕಲಾವಿದರು ಕೊರೋನಾ ಮಹಾಮಾರಿಯಿಂಅದಾಗಿ ಸಂಕಷ್ಟದಲ್ಲಿದ್ದಾರೆ. ಅವರಿಗೂ ಸರಕಾರ ನೇರವಾಗಬೇಕು. ಸರಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಪ್ಯಾಕೇಜ್ ಘೋಷಣೆ ಮಾಡಿದ್ದು ಈ ಕೂಡಲೇ ಉಳಿದ ವರ್ಗಗಳ ಬಗ್ಗೆ ಗಮನಹರಿಸಲಿ ಎಂದು ಬಾವಾ ಒತ್ತಾಯಿಸಿದ್ದಾರೆ.