ಹಸಿ ಕರಗ ಉತ್ಸವ ಸಂಪನ್ನ

ಬೆಂಗಳೂರು, ಏ.೨೨-ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ ಪ್ರಕ್ರಿಯೆ ಆರಂಭ ಹಿನ್ನೆಲೆ ಕರಗಕುಂಟೆಯ ಶಕ್ತಿಪೀಠದಲ್ಲಿ ಪರಂಪರೆಯಲ್ಲಿ ಹಸಿಕರಗ ಮಹೋತ್ಸವವನ್ನು ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಶಕ್ತ್ಯೋತ್ಸವ ಏ.೨೩ರ ಚೈತ್ರ ಪೂರ್ಣಿಮಾ ದಿನವಾದ ಮಂಗಳವಾರ ರಾತ್ರಿ ನಡೆಯಲಿದೆ.ಆದಿಶಕ್ತಿ ದ್ರೌಪದಿದೇವಿಯಿಂದ ಶಕ್ತಿಯ ಆವಾಹನೆ ಮಾಡಿಕೊಳ್ಳುವ ವಿಧಿಯೊಂದಿಗೆ ’ಹಸಿಕರಗ’ ಆರಂಭವಾಗಿದ್ದು, ಸಂಪಂಗಿ ಕೆರೆಯ ಕರಗದ ಕುಂಟೆಯ ಶಕ್ತಿ ಪೀಠದಲ್ಲಿ ಖಡ್ಗ, ತ್ರಿಶೂಲಗಳನ್ನಿಟ್ಟು , ಕೆಂಪು ಬಟ್ಟೆಯಿಂದ ಅಲಂಕಾರಗೊಂಡ ’ಹಸೀಕರಗ’ಕ್ಕೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತರು ರಾಶಿ ರಾಶಿ ಕರ್ಪೂರ ಹಚ್ಚಿ ಭಕ್ತಿ ಸಮರ್ಪಿಸಿದರು.ಏ.೨೩ರ ಚೈತ್ರ ಪೌರ್ಣಿಮೆಯಂದು ಮಧ್ಯರಾತ್ರಿ ೧೨.೩೦ಕ್ಕೆ ಆರಂಭವಾಗುವ ಕರಗ ಉತ್ಸವವು ಸಾಗಿ ಬರುವ ದಾರಿಯುದ್ದಕ್ಕೂ ತಳಿರು ತೋರಣ, ರಂಗೋಲಿ, ವಿದ್ಯುದೀಪಾಲಂಕಾರವನ್ನು ಮಾಡಲಾಗಿದೆ.ಮೊದಲಿಗೆ ಮಸ್ಥಾನ್‌ಸಾಬ್ ದರ್ಗಾಕ್ಕೆ ತೆರಳಿ ಧೂಪವನ್ನು ಸ್ವೀಕರಿಸುವ ಮೂಲಕ ಸೌಹಾರ್ಧತೆಗೆ ಸಾಕ್ಷಿಯಾಗುವ ಕರಗವು ತಿಗಳರಪೇಟೆ, ಬಳೇಪೇಟೆ, ಚಿಕ್ಕಪೇಟೆ, ಅಣ್ಣಮ್ಮ ದೇವಾಲಯಕ್ಕೆ ಸಾಗಲಿದೆ. ಅಂತಿಮವಾಗಿ ಬೆಳಗಿನ ಸೂರ್ಯೋದಯಕ್ಕೆ ಸರಿಯಾಗಿ ಕರಗವು ಧರ್ಮರಾಯಸ್ವಾಮಿ ದೇವಾಲಯವನ್ನು ತಲುಪಲಿದೆ.ಏ.೨೪ಕ್ಕೆ ಪದ್ಧತಿಯಂತೆ ದೇವಾಲಯದಲ್ಲಿ ಗಾವು ಪೂಜೆ ಹಾಗೂ ಏ.೨೫ರಂದು ಕೊನೆಯ ದಿವಸ ವಸಂತೋತ್ಸವದ ಮೂಲಕ ಕರಗ ಮಹೋತ್ಸವಕ್ಕೆ ತೆರೆಬೀಳಲಿದೆ.ಮದ್ಯ ಮಾರಾಟ ಬಂದ್: ಇಲ್ಲಿನ ಹಲಸೂರು ಗೇಟ್, ಎಸ್‌ಆರ್ ನಗರ, ವಿಲ್ಸನ್ ಗಾರ್ಡನ್, ಎಸ್‌ಜೆ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಆಯುಕ್ತ ದಯಾನಂದ ಆದೇಶ ಹೊರಡಿಸಿದ್ದಾರೆ.ಬೆಂಗಳೂರು ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವ ಸಾಧ್ಯತೆ ಇದೆ. ಇದು ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡುವ ಸಂಭವವಿದೆ.ಹೀಗಾಗಿ ಮುನ್ನೆಚ್ಚರಿಕೆ ಸಲುವಾಗಿ ಏ.೨೩ರ ಬೆಳಗ್ಗೆ ೬ಗಂಟೆಯಿಂದ ಮರುದಿನ ೨೪ರ ಬೆಳಗ್ಗೆ ೧೦ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಇತಿಹಾಸ ಪ್ರಸಿದ್ಧ “ಬೆಂಗಳೂರು ಕರಗದ” ಪ್ರಯುಕ್ತ ಇಂದು ಬೆಳಗಿನ ಜಾವ ನಗರದ ಕಬ್ಬನ್ ಪಾರ್ಕ್‌ನಲ್ಲಿರುವ ಶಕ್ತಿಪೀಠದಲ್ಲಿ ಹಸಿಕರಗ ಅದ್ಧೂರಿಯಾಗಿ ನಡೆತು. ಸಾವಿರಾರು ಭಕ್ತರು ಭಾಗವಹಿಸಿದ್ದರು.

ನಾಲ್ಕು ಠಾಣಾ ವ್ಯಾಪ್ತಿಯ ಬಾರ್ ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ವೈನ್ ಶಾಪ್, ಪಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.ಇನ್ನೂ ಈ ಬಾರಿಯೂ ಕರಗವನ್ನು ಕರಗದ ಪೂಜಾರಿ ಎ. ಜ್ಞಾನೇಂದ್ರ ಹೊರಲಿದ್ದಾರೆ. ಈ ಮೂಲಕ ಜ್ಞಾನೇಂದ್ರ ೧೩ನೇ ಬೆಂಗಳೂರು ಕರಗ ಹೊರುತ್ತಿದ್ದಾರೆ. ಇನ್ನೂ ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕಿಡಿಗೇಡಿಗಳು ಕರಗದ ಪೂಜಾರಿ ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿದ್ದರು.ಆ ಮೂಲಕ ಕರಗ ಮಹೋತ್ಸವಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೂ ಕರಗದ ಪೂಜಾರಿ ಜ್ಞಾನೇಂದ್ರ ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿಯಲ್ಲಿ ಉತ್ಸವ ಮುಗಿಸಿದರು. ಹಿಂದಿನ ಘಟನೆಯನ್ನು ಮರುಕಳಿಸಬಾರೆಂದು ಈ ಬಾರಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.