ಹಸಿವೇ ಇಸ್ರೇಲ್‌ಗೆ ಯುದ್ಧಾಸ್ತ್ರ

ಜಿನೆವಾ, ಮಾ.೨೦- ಗಾಜಾದಲ್ಲಿ ಹಸಿವನ್ನು ಇಸ್ರೇಲ್ ಯುದ್ದದ ಅಸ್ತ್ರವನ್ನಾಗಿ ಬಳಸುವ ಮೂಲಕ ಯುದ್ಧಾಪರಾಧ ಎಸಗುತ್ತಿದೆ. ಗಾಜಾದ ದುರಂತವು ಮಾನವ ನಿರ್ಮಿತವಾಗಿದ್ದು, ಹಾಗಾಗಿ ಇದನ್ನು ತಡೆಯಬಹುದಾಗಿದೆ ಎಂದು ವಿಶ್ವಸಂಸ್ಥೆ (ಯುಎನ್)ಯ ಮಾನವ ಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಗಾಜಾದಲ್ಲಿ ಸದ್ಯ ತೀವ್ರ ಆಹಾರದ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಯುಎನ್ ಈ ಪ್ರತಿಕ್ರಿಯೆ ನೀಡಿದೆ.
ಇಸ್ರೇಲ್ ಮಾನವೀಯ ನೆರವು ಮತ್ತು ವಾಣಿಜ್ಯ ಸರಕುಗಳ ಪ್ರವೇಶ ಮತ್ತು ವಿತರಣೆಗೆ ನಿರ್ಬಂಧ ವಿಧಿಸಿದೆ. ಇದರ ಪರಿಣಾಮವಾಗಿ ಇಲ್ಲಿ ಹಸಿವು, ಆಹಾರದ ಕೊರತೆ ಹಾಗೂ ಕ್ಷಾಮದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಜನಸಮುದಾಯ ನೆಲೆ ಕಳೆದುಕೊಂಡಿದ್ದು ಪ್ರಮುಖ ನಾಗರಿಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಗಾಜಾಕ್ಕೆ ನೆರವಿನ ಪ್ರವೇಶದ ಮೇಲೆ ಇಸ್ರೇಲ್‌ನ ಮುಂದುವರಿದಿರುವ ನಿರ್ಬಂಧದ ವ್ಯಾಪ್ತಿಯು ಮತ್ತು ಅದು ಯುದ್ಧವನ್ನು ಮುಂದುವರಿಸಿರುವ ವಿಧಾನವು ಹಸಿವನ್ನು ಯುದ್ಧಾಸ್ತ್ರವಾಗಿ ಬಳಸುವುದಕ್ಕೆ ಸಮವಾಗಿದೆ. ಮತ್ತು ಇದು ಯುದ್ಧಾಪರಾಧವಾಗಿದೆ. ಈಗ ಕ್ಷಣಗಣನೆ ಆರಂಭವಾಗಿದೆ. ಹಸಿವಿನಿಂದ ಬಳಲುವುದನ್ನು ತಡೆಯಲು ಮತ್ತು ಬರಗಾಲದ ಅಪಾಯವನ್ನು ದೂರಗೊಳಿಸಲು, ಅತ್ಯಗತ್ಯ ಮಾನವೀಯ ನೆರವು ಹಾಗೂ ವಾಣಿಜ್ಯ ಸರಕು ಫೆಲೆಸ್ತೀನ್ ಪ್ರದೇಶವನ್ನು ಸರಾಗವಾಗಿ ಪ್ರವೇಶಿಸಲು ಮತ್ತು ಅಡೆತಡೆಯಿಲ್ಲದೆ ವಿತರಣೆಯಾಗಲು ಇಸ್ರೇಲ್ ಕ್ರಮ ಕೈಗೊಳ್ಳಬೇಕೆಂದು ಪ್ರಭಾವಿಗಳು ಸೇರಿದಂತೆ ಎಲ್ಲರೂ ಆಗ್ರಹಿಸಬೇಕೆಂದು ಎಂದು ವೋಕರ್ ಟರ್ಕ್ ತಿಳಿಸಿದ್ದಾರೆ. ಇದೇ ವೇಳೆ ಜಿನೆವಾದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರ ವಕ್ತಾರ ಜೆರೆಮಿ ಲಾರೆನ್ಸ್, ಗಾಜಾದ ಜನರ ಸಂಕಟ ಆತ್ಮಸಾಕ್ಷಿಗೆ ವಿರುದ್ಧವಾಗಿದೆ. ಇಸ್ರೇಲ್ ಹಸಿವನ್ನು ಯುದ್ಧಾಸ್ತ್ರವಾಗಿ ಬಳಸಿದೆಯೇ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಲಿದೆ ಎಂದು ತಿಳಿಸಿದ್ದಾರೆ. ಯುದ್ಧದಿಂದ ಜರ್ಝರಿತಗೊಂಡಿರುವ ಫೆಲೆಸ್ತೀನ್ ಪ್ರದೇಶದಲ್ಲಿ ಕ್ಷಾಮ ಸನ್ನಿಹಿತವಾಗಿದೆ. ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಯುದ್ಧದ ಬಳಿಕ ಗಾಜಾದ ಸುಮಾರು ೧.೧ ದಶಲಕ್ಷ ಜನತೆ ಹಸಿವಿನ ದುರಂತಕ್ಕೆ ಸಾಕ್ಷಿಯಾಗಿದ್ದಾರೆ. ನೆರವಿನ ಪೂರೈಕೆ ಹೆಚ್ಚದಿದ್ದರೆ ಯುದ್ಧದಿಂದ ಜರ್ಝರಿತಗೊಂಡಿರುವ ಉತ್ತರ ಗಾಜಾದಲ್ಲಿ ಸುಮಾರು ೩ ಲಕ್ಷ ಜನತೆ ಕ್ಷಾಮದ ದವಡೆಗೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆದ ಆಹಾರ ಭದ್ರತೆ ಪರಿಶೀಲನಾ ತಂಡದ ವರದಿ ಹೇಳಿದೆ.