
ಬಡತನ ಮತ್ತು ಹಸಿವಿನ ಮಹತ್ವ ಹೇಳುವ “ರಂಜಾನ್” ಚಿತ್ರ ಮುಂದಿನವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಕಲಾವಿದ ಸಂಗಮೇಶ ಉಪಾಸೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಮುಂದಿನವರ ಸರಿ ಸುಮಾರು 70ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಯೂನಿವರ್ಸಲ್ ಸ್ಟುಡಿಯೋ ವಿಜಯಪುರ ಸಹಯೋಗದಲ್ಲಿ ಗುಡ್ ಫ್ರೈಡೆ ಪ್ರಯುಕ್ತ ಲಿರಿಕಲ್ ರೈತ ಗೀತೆ ಹಾಗೂ ‘ಹೋರಾಟವೇ ಜೀವನ` ಹಾಡುಗಳನ್ನು ಅನಾವರಣ ಮಾಡಲಾಯಿತು. ಈ ವೇಳೆ ಮಾತಿಗಿಳಿದ ನಾಯಕ ಸಂಗಮೇಶ್ ಉಪಾಸೆ,ಫಕೀರ್ ಮುಹಮ್ಮದ್ ಕಟ್ಪಾಡಿ ಅವರ `ನೊಂಬು’ ಕಥೆ ಆಧರಿಸಿ `ರಂಜಾನ್’ ಚಿತ್ರ ತಯಾರಿಸಲಾಗಿದೆ. ರಂಜಾನ್ ಎಂದರೆ ಉಪವಾಸ ಎನ್ನುವುದು ಎಲ್ಲರಿಗೂ ತಟ್ಟನೆ ನೆನಪಿಗೆ ಬರುತ್ತದೆ. ಈ ಚಿತ್ರ ಹಸಿವು, ನೋವು ಕುರಿತಾಗಿ ಇರುವುದರಿಂದ ರಂಜಾನ್ ಎಂದು ಹೆಸರಿಡಲಾಗಿದೆ. ಚಿತ್ರವನ್ನುಉಡುಪಿ, ಮಂಗಳೂರು ಮತ್ತಿತರ ಕಡೆ ಶೂಟಿಂಗ್ ಮಾಡಲಾಗಿದೆ. ಇದೇ ತಿಂಗಳು ರಂಜಾನ್ ಮಾಸ ಇರುವುದರಿಂದ ರಂಜಾನ್ ಹಬ್ಬದಂದು ಚಿತ್ರ ಬಿಡುಗಡೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹಂಚಿಕೊಂಡರು.
ಚಿತ್ರಕತೆ,ಸಂಭಾಷಣೆ, ನಿರ್ದೇಶನ ಪಂಚಾಕ್ಷರಿ ಸಿ.ಈ. ಅವರದು. ಛಾಯಾಗ್ರಹಣ ರಂಗಸ್ವಾಮಿ, ಸಂಗೀತ ಕೆ.ಎಂ.ಇಂದ್ರ, ನಿರ್ಮಾಣ ನಿರ್ವಹಣೆ ರಾಜಕುಮಾರ್ ಉಪಾಸೆ, ಮಹಮ್ಮದ್ ರಫೀ ಪಾಶ ಸೇರಿದಂತೆ ಇತರರು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿ ಇರುವ ಚಿತ್ರವನ್ನು ನೋಡಿ ಎಲ್ಲರೂ ಹರಸಿ ಎಂದು ಕೇಳಿಕೊಂಡರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್,ಸೊಪ್ಪಿನ ಮಠದ ಚನ್ನಬಸವೇಶ್ವರ ಸ್ವಾಮೀಜಿ, ಮೆಥೋಡಿಸ್ಟ್ ಚರ್ಚ್ ಪಾಸ್ಟರ್ ರೆವರೆಂಡ್ ಆನಂದ, ಸದರ್ ದರ್ವಾಜ ಮಸೀದಿ ಮೌಲ್ವಿ ಅಬ್ದುಲ್ ಸಲೀಂ ಸಾಬ್ ಕ್ವಾರಿ ಚಿತ್ರ ಯಶಸ್ವಿಯಾಗಲಿ ಎಂದು ಶುಭಕೋರಿದರು.ಎರಡು ಹಾಡುಗಳು, ಚಿತ್ರದ ಟ್ರೈಲರ್ ಅನ್ನು ಪ್ರದರ್ಶಿಸಲಾಯಿತು. ನಿರ್ಮಾಪಕ ಮಡಿವಾಳ ಗೋಗಿ, ಅಶೋಕ ಕುಮಾರ ಈ ವೇಳೆ ಹಾಜರಿದ್ದರು.