ಹಸಿವು ತಾಳದೆ ಕೂಲಿ ಕಾರ್ಮಿಕ ನೇಣು

ತಿರುವನಂತಪುರಂ,ಜ.2-ಹಸಿವು ತಾಳಲಾರದೆ ಕೂಲಿ ಕಾರ್ಮಿಕರೊಬ್ಬರು
ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಪ್ರಫುಲ್ಲ ಕುಮಾರ್​ (50) ಆತ್ಮಹತ್ಯೆ ಮಾಡಿಕೊಂಡವರು. ಸ್ಥಳೀಯ ಕ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 145 ದಿನಗಳಿಂದ ಕಂಪನಿ ಮುಚ್ಚಿದೆ. ಕಂಪನಿ ಪುನರಾರಂಭಿಸುವಂತೆ ಒತ್ತಾಯಿಸಿ ಕಳೆದೊಂದು ತಿಂಗಳಿನಿಂದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಫುಲ್ಲ ಕುಮಾರ್ ನಿನ್ನೆ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಡುಬಡತನದಲ್ಲಿದ್ದ ಅವರಿಗೆ ಈ ಕೆಲಸವೊಂದೇ ಜೀವನಾಧಾರವಾಗಿತ್ತು. ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಪ್ರಫುಲ್ಲ ಹಸಿವು ತಾಳಲಾರದೆ ಈ ನಿರ್ಧಾರಕ್ಕೆ ಬಂದಿರಬೇಕೆಂದು ಅವರ ಸಹದ್ಯೋಗಿಗಳು ಹೇಳಿದ್ದಾರೆ.
ಇದೀಗ ಪ್ರಫುಲ್ಲ ಅವರ ಮೃತದೇಹವನ್ನಿಟ್ಟುಕೊಂಡು ಕಾರ್ಮಿಕರು ಪ್ರತಿಭಟನೆ ಮುಂದುವರೆಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಆಗ್ರಹಿಸಿದ್ದಾರೆ.