
ಕಲಬುರಗಿ:ಮಾ.2: ಹಸಿವಿನ ಸಾವು ಹಾಗೂ ರೈತರ ಆತ್ಮಹತ್ಯೆಗಳನ್ನು ಮತ್ತು ಸಾಲದ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಬಜೆಟ್ ಹೆಚ್ಚಿಸಲಿದೆ. ಇದನ್ನು ವಿರೋಧಿಸಿ ಏಪ್ರಿಲ್ 4ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 45 ಲಕ್ಷ ಕೋಟಿ ರೂ.ಗಳ 2023-2024ನೇ ಸಾಲಿನ ಬಜೆಟ್ ಮಂಡಿಸಿದೆ. ಅದೇ ರೀತಿ ರಾಜ್ಯ ಸರ್ಕಾರಕ್ಕೆ ಅವಧಿ ಇಲ್ಲದಿದ್ದರೂ ಸುಮಾರು 3 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದೆ. ಕೇಂದ್ರ ಈ ವರ್ಷಕ್ಕೆ 18 ಕೋಟಿ ರೂ.ಗಳ ಸಾಲ ಎತ್ತುವುದಾಗಿ ಮತ್ತು ರಾಜ್ಯ 77000 ಕೋಟಿ ರೂ.ಗಳ ಸಾಲ ಪಡೆಯುವುದಾಗಿ ಪ್ರಕಟಿಸಿದೆ. ಕೇಂದ್ರ ಈವರೆಗೆ ಸುಮಾರು 169 ಲಕ್ಷ ಕೋಟಿ ರೂ.ಗಳ ಸಾಲದ ಭಾರವನ್ನು ದೇಶದ ಜನತೆ ಮೇಲೆ ಹೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಸುಮಾರು 86 ಲಕ್ಷ ಕೋಟಿ ರೂ.ಗಳ ಸಾಲ ಹೊರಿಸಲಾಗಿದೆ ಎಂದು ದೂರಿದರು.
ಕರ್ನಾಟಕ ಸರ್ಕಾರದ ಸಾಲಗಳು ಒಟ್ಟಾಗಿ 5.8 ಲಕ್ಷ ಕೋಟಿ ರೂ.ಗಳಾಗಿದೆ. ಇದರಿಂದ ರಾಜ್ಯದ ಜನತೆಯ ತಲಾ ಸಾಲವು 2.10 ಲಕ್ಷ ರೂ.ಗಳಾಗಲಿದೆ. ಇಷ್ಟು ಸಾಲ ಮಾಡಿಯೂ ಈ ಸರ್ಕಾರಗಳ ಸಾಧನೆ ಏನು ಎಂಬುದನ್ನು ಜಾಗತಿಕ ವರದಿಗಳು ಬಯಲುಗಿಳಿಸಿವೆ ಎಂದು ಅವರು ಹೇಳಿದರು.
ದೇಶ 121 ಹಸಿವಿನ ಸೂಚ್ಯಂಕದಲ್ಲಿ 107ನೇ ಸ್ಥಾನದ ದಯನೀಯ ಸ್ಥಿತಿಯಲ್ಲಿದೆ. ದೇಶದಲ್ಲಿ ಪ್ರತಿ ನಿಮಿಷಕ್ಕೆ 11ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಕೋವಿಡ್-19ನಂತಹ ಭಯಾನಕ ವ್ಯಾದಿಯು ಜಗತ್ತಿನಲ್ಲಿ ಗಂಟೆಗೆ 100 ಜನರ ಆಹುತಿ ಪಡೆದರೆ, ಭಾರತದಲ್ಲಿ ಅಪೌಷ್ಠಿಕತೆಯ ಸಾವುಗಳು ಅದನ್ನು ಮೀರಿ ಅದರ ಆರು ಪಟ್ಟು ಅಂದರೆ ಗಂಟೆಗೆ 660ರಷ್ಟು ಸಂಭವಿಸುವ ಮೂಲಕ ಇದೊಂದು ಮಹಾವ್ಯಾಧಿಯಾಗಿ ಮುಂದುವರೆದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಪೌಷ್ಠಿಕತೆ ನಿವಾರಣೆಗಾಗಿ ಪೌಷ್ಠಿಕತೆಯ ಬಜೆಟ್ ದ್ವಿಗುಣಗೊಳಿಸಬೇಕಾದ ಕೇಂದ್ರ ಸರ್ಕಾರ ಕಳೆದ ವರ್ಷಕ್ಕಿಂತ 20,000 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಕಡಿತಗೊಳಿಸಿದೆ. ರಾಜ್ಯ ಸರ್ಕಾರವೂ ಸಹ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರ ಪಡಿತರ ವಿತರಣೆಯನ್ನೂ ಬಲಗೊಳಿಸಿಲ್ಲ. ಬದಲಾಗಿ ಕೇಂದ್ರ ಈಗಾಗಲೇ ತಲಾ ಐದು ಕೆಜಿ ಅಕ್ಕಿಯನ್ನು 83 ಕೋಟಿ ಪಡಿತರ ಚೀಟಿದಾರರಿಗೆ ಕಡಿತ ಮಾಡಿದೆ. ಮಾತ್ರವಲ್ಲ ಅನುದಾನ ಹೆಚ್ಚಿಸುವ ಬದಲು ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 90,000 ಕೋಟಿ ರೂ.ಗಳನ್ನು ಕಡಿತ ಮಾಡಿದೆ ಎಂದು ಟೀಕಿಸಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸುವುದು ಹಾಗೂ ನಗರ ಪ್ರದೇಶಕ್ಕೂ ವಿಸ್ತರಿಸುವುದೂ ಸೇರಿದಂತೆ ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಸೇರಿಸಲು ಒತ್ತಾಯಿಸಲಾಗಿತ್ತು. ಪ್ರಧಾನಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಗರ ಪ್ರದೇಶಕ್ಕೆ ಉದ್ಯೋಗ ಖಾತ್ರಿ ವಿಸ್ತರಿಸಲು ನಿರ್ಧರಿಸಿದರೂ ಸಹ ಬಜೆಟ್‍ನಲ್ಲಿ ಅದನ್ನು ಪ್ರಕಟಿಸಿಲ್ಲ. ಅಲ್ಲದೇ ಕಳೆದ ವರ್ಷದ 83000 ಕೋಟಿ ರೂ.ಗಳಿಂದ 45000 ಕೋಟಿ ರೂ.ಗಳಿಗೆ ಕಡಿತ ಮಾಡಿ ಕಳೆದ ಬಾರಿ ದೊರೆತ 45 ದಿನಗಳ ಕೆಲಸಕ್ಕಿಂತಲೂ ಅದರ ಅರ್ಧಕ್ಕಿಂತಲೂ ಕಡಿಮೆ ಮಾಡಿ ಕೆಲಸ ಮಾತ್ರವೇ ದೊರೆಯಂತೆ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಲ ಮನ್ನಾ ಮಾಡುವುದು, ಋಣ ಮುಕ್ತ ಹಾಗೂ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ತರಬೇಕಾಗಿತ್ತು. ಆ ಕುರಿತು ಯಾವುದೇ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ. ಅಲ್ಲದೇ ಒಂದು ಪೈಸೆ ಹಣವನ್ನು ಕೃಷಿ ಉತ್ಪನ್ನಗಳ ಖರೀದಿಗೆ ಒದಗಿಸಿಲ್ಲ. ಆ ಮೂಲಕ ಬೆಲೆಗಳಲ್ಲಿ ಏರಿಳಿತ ಮಾಡಿ ಲೂಟಿ ಮಾಡುವ ವ್ಯಾಪಾರಿ ಬಂಡವಾಳದಾರರಿಗೆ ಖರೀದಿಯನ್ನು ಬಿಡಲಾಗಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅಸಮರ್ಪಕ ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹ ಧನ ಪ್ರಕಟಿಸಲಿಲ್ಲ. ಖರೀದಿಗೆ ಹೆಚ್ಚಿನ ಹಣ ಒದಗಿಸಿಲ್ಲ ಎಂದು ಅವರು ಆರೋಪಿಸಿದರು.
ಕಾರ್ಮಿಕರಿಗೆ ಕನಿಷ್ಠ ಮಾಸಿಕ ವೇತನ 26000ರೂ.ಗಳಿಗೆ ನಿಗದಿಪಡಿಸಲು ಒತ್ತಾಯಿಸಿದರೂ ಸಹ ಕನಿಷ್ಠ ವೇತನವನ್ನೂ ಹೆಚ್ಚಿಸಿಲ್ಲ. ಬದಲಾಗಿ 8 ತಾಸುಗಳ ದುಡಿಮೆ ಅವಧಿಯನ್ನು 13 ತಾಸುಗಳಿಗೆ ವಿಸ್ತರಿಸಿ ಕೈಗಾರಿಕಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಬಂಡವಾಳದಾರರು ಅವರ ಶ್ರಮವನ್ನು ಯಥೇಚ್ಛವಾಗಿ ಲೂಟಿ ಮಾಡಲು ಅವಕಾಶ ಕೊಡಲಾಗಿದೆ ಎಂದು ಅವರು ಕಿಡಿಕಾರಿದರು.
ಪೆಟ್ರೋಲಿಯಂ, ಆಹಾರದ ಉತ್ಪನ್ನಗಳು, ಔಷಧಿಗಳು, ರಾಸಾಯನಿಕ ರಸಗೊಬ್ಬರ, ಬೀಜ, ಕ್ರಿಮಿನಾಶಕಗಳ ಬೆಲೆ ಹೆಚ್ಚಳ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕಾರ್ಪೋರೇಟ್ ಹಾಗೂ ಬಂಡವಾಳದಾರರ ಸಂಪತ್ತಿನ ತೆರಿಗೆಯನ್ನು ಶೇಕಡಾ 30ರಿಂದ 22ಕ್ಕೆ ಇಳಿಸಿದೆ. ಹೀಗಾಗಿ ಬಡವರು ಬಡವರಾಗಿಯೇ, ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುವಂತಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರ ಜಾತಿವಾದ ಬೆಳೆಸುತ್ತಿದೆ. ಬಡವರ ಮಾಸಿಕ ಪಿಂಚಣಿ ಹೆಚ್ಚಿಸದೇ ದೇವಸ್ಥಾನಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ.ಗಳನ್ನು ನೀಡಿದೆ. ಜಾತಿಗೊಂದು ನಿಗಮ, ಮಂಡಳಿಗಳನ್ನು ರಚಿಸಿದೆ. ಆಳಂದ್ ಲಾಡ್ಲೆ ಮಶಾಕ್, ಹಂಪಿ ಪ್ರದೇಶದ ಅಂಜನಾದ್ರಿಯಲ್ಲಿ ಕೋಮು ಸಾಮರಸ್ಯವನ್ನು ಹಿಂದೂತ್ವವಾದಿಗಳು ಹಾಳು ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ವ್ಯಾಪ್ತಿಯ ರಕ್ಕಸ ತಂಗಡಿಗೆ ಹಿಂದೂ ಮುಸ್ಲಿಂರ ಸೌಹಾರ್ದವನ್ನು ಹಾಳು ಮಾಡಲು ಐತಿಹಾಸಿಕ ಸ್ಮಾರಕ ಕಟ್ಟಲು ಯೋಜಿಸಿದೆ. ಈಗಾಗಲೇ ಶ್ರೀರಂಗಪಟ್ಟಣದಲ್ಲಿ ಜಾಮೀಯಾ ಮಸೀದಿಯಲ್ಲಿ ಹನುಮಂತನ ದೇವಸ್ಥಾನ ಕಟ್ಟುವ ಹುಯಿಲೆಬ್ಬಿಸಿ ಹನುಮ ಮಾಲಾಧಾರಿಗಳ ಜಾತ್ರೆಗಳನ್ನು ಸಂಘಟಿಸುತ್ತಿದೆ. ಒಕ್ಕಲಿಗ ಸಚಿವರೊಬ್ಬರು ಇತಿಹಾಸವನ್ನು ಕೋಮುವಾದಕ್ಕೆ ತಿರುಚಿ ಟಿಪ್ಪುವನ್ನು ಉರಿಗೌಡ ಹಾಗೂ ನಂಜೇಗೌಡರೆಂಬ ಕಾಲ್ಪನಿಕ ವ್ಯಕ್ತಿಗಳು ಕೊಂದಂತೆ ಸಿದ್ಧರಾಮಯ್ಯ ಅವರನ್ನು ಮುಗಿಸಬೇಕೆಂಬ ಹೇಳಿಕೆ ನೀಡಿದ್ದಾರೆ. ಇದೆಲ್ಲ ಕೋಮುವಾದಕ್ಕೆ ಪ್ರಚೋದಿಸುವ ಹುನ್ನಾರವಾಗಿದೆ ಎಂದು ಅವರು ಟೀಕಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನತೆಯ ಮೇಲಿನ ದಾಳಿಯನ್ನು ತಡೆಯಲು ಹಾಗೂ ಜನತೆಯ ಸೌಹಾರ್ದ ರಕ್ಷಿಸಲು, ಲೂಟಿಕೋರತನ ನಿಲ್ಲಿಸಲು ಒತ್ತಾಯಿಸಿ ಏಪ್ರಿಲ್ 4ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಡಾ. ಸಾಯಿಬಣ್ಣ ಗುಡುಬಾ, ಶ್ರೀಮತಿ ಗೌರಮ್ಮ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.