ಹಸಿವಿನ ನಾಟಕವಾಡಿ ಖಾನಾವಳಿ ಮೇಲ್ಮಹಡಿಯಿಂದ ಜಿಗಿದು ಕೈಕಾಲು ಮುರಿದುಕೊಂಡ ಕುಖ್ಯಾತ ಆರೋಪಿ ಮಾಶಾಳ್‍ದ ಮಹಾಂತೇಶ್ ಉಜನಿ

ಕಲಬುರಗಿ:ಸೆ.23:ಅಫಜಲಪುರ, ಸೆ.22- ರಾಜ್ಯದ ಹಲವು ಜಿಲ್ಲೆಗಳ ಪೋಲಿಸ್ ಠಾಣೆಗಳಲ್ಲಿ ಸುಮಾರು 41 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿ ಅಫಜಲಪುರ ತಾಲ್ಲೂಕಿನ ಮಾಶಾಳ್‍ದ ಮಹಾಂತೇಶ್ ಉಜನಿ ಪೋಲಿಸ್ ವಶದಿಂದ ತಪ್ಪಿಸಿಕೊಳ್ಳಲು ಹಸಿವಿನ ನಾಟಕವಾಡಿ ಖಾನಾವಳಿಗೆ ಹೋದ ಸಂದರ್ಭದಲ್ಲಿ ಮೇಲ್ಮಹಡಿಯಿಂದ ಜಿಗಿದು ಪರಾರಿಯಾಗಲು ಹೋಗಿ ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಘಟನೆ ಕಲಬುರ್ಗಿ ಆಸ್ಪತ್ರೆ ಪಾಲಾಗಿದ್ದಾನೆ.
ಕಳೆದ ಗುರುವಾರ ತಡರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಕಲಬುರ್ಗಿ ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ಶಿವಾಜಿ ಮರಾಠಾ ಖಾನಾವಳಿಗೆ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಪೋಲಿಸರಿಂದ ತಪ್ಪಿಸಿಕೊಳ್ಳಲು ಎರಡನೇ ಮಹಡಿಯಿಂದ ಕೆಳಗೆ ಜಿಗಿದ ಪರಿಣಾಮ ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದಾನೆ.
ಕುಖ್ಯಾತ ಆರೋಪಿಯು ಮಾಶಾಳ್‍ದಲ್ಲಿ ಮನೆಯೊಂದನ್ನು ಹೊಂದಿದ್ದು, ಮನೆಯ ವಿದ್ಯುತರ್ ಬಿಲ್ ಸುಮಾರು 8000ರೂ.ಗಳು ಬಂದಿತ್ತು. ಹೀಗಾಗಿ ಜೆಸ್ಕಾಂ ಸಿಬ್ಬಂದಿಗೆ ಈ ಕುರಿತು ಕಳೆದ ಮೂರು ದಿನಗಳ ಹಿಂದೆ ವಿಚಾರಿಸಿದ್ದ. ಬಿಲ್ ನೀಡುವ ವ್ಯಕ್ತಿ ಕಳೆದ ಮೂರು ತಿಂಗಳ ಬಿಲ್‍ನಲ್ಲಿ ಡೋರ್ ಲಾಕ್ ಎಂದು ಬಿಲ್ ನೀಡಿಲ್ಲವಂತೆ. ಆದಾಗ್ಯೂ, ಕಳೆದ ಕೆಲ ದಿನಗಳ ಹಿಂದೆ ಆಗಸ್ಟ್ ತಿಂಗಳ 8000ರೂ.ಗಳ ಬಿಲ್ ನೀಡಿ ಹೋಗಿದ್ದನಂತೆ. ಮನೆಯಲ್ಲಿ ಎಲ್ಲರೂ ಇದ್ದಾರೆ. ಆಆಗ್ಯೂ, ಡೋರ್ ಲಾಕ್ ಹೇಳಿರುವುದು ಮತ್ತು 8000ರೂ.ಗಳ ಬಿಲ್ ನೀಡಿದ್ದು ಆರೋಪಿ ಮಹಾಂತೇಶನಿಗೆ ಆಘಾತ ಉಂಟು ಮಾಡಿತ್ತು. ಅದೇ ಕಾರಣಕ್ಕೆ ಜೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದರೂ ಸಹ ಯಾರೂ ಕೂಡ ಸ್ಪಂದಿಸಲಿಲ್ಲ. ಹೀಗಾಗಿ ಕಳೆದ ಗುರುವಾರ ಬೆಳಿಗ್ಗೆ ಪಟ್ಟಣದಲ್ಲಿರುವ ಜೆಸ್ಕಾಂ ಕಚೇರಿಗೆ ಹೋಗಿ, ಅಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಿದಾನಂದ್ ಜೊತೆಗೆ ಜಗಳ ತೆಗೆದು ಅವರ ಮೇಲೆ ಹಲ್ಲೆ ಮಾಡಿದ. ಇದರಿಂದಾಗಿ ಚಿದಾನಂದ್ ಅವರು ಪೋಲಿಸ್ ಠಾಣೆಗೆ ಮಧ್ಯಾಹ್ನ ದೂರು ಸಲ್ಲಿಸಿದ್ದರು. ಆ ದೂರಿನ ಆಧಾರದ ಮೇಲೆ ಪೋಲಿಸರು ಮಹಾಂತೇಶ್‍ನಿಗೆ ಬಂಧಿಸಿದ್ದರು.
ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಆರೋಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರಂತೆ. ನ್ಯಾಯಾಧೀಶರು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಹೀಗಾಗಿ ಕಳೆದ ರಾತ್ರಿ ಪೋಲಿಸರು ಆತನಿಗೆ ಅಫಜಲಪುರದಿಂದ ಕಲಬುರ್ಗಿ ಜೈಲಿಗೆ ಬಿಡಲು ಕರೆದುಕೊಂಡು ಬಂದಿದ್ದರು. ಆದಾಗ್ಯೂ, ಜೈಲಿಗೆ ಹೋಗುವ ಮುನ್ನ ಮಹಾಂತೇಶ್ ತನಗೆ ಸಕ್ಕರೆ ಕಾಯಿಲೆ ಇದೆ. ಹಸಿವು ಆಗಿದೆ ಎಂದು ಹೇಳಿದ್ದನಂತೆ. ಆಗ ಪೋಲಿಸರು ಆರೋಪಿ ಮಹಾಂತೇಶನಿಗೆ ಕಲಬುರ್ಗಿ ನಗರದ ಶಿವಾಜ,ಇ ಖಾನಾವಳಿಗೆ ಕರೆದುಕೊಂಡು ಹೋಗಿದ್ದಾರೆ. ಆದಾಗ್ಯೂ, ಅಲ್ಲಿ ಊಟವಾದ ಮೇಲೆ ಆರೋಪಿ ಮಹಾಂತೇಶ್ ತಪ್ಪಿಸಿಕೊಂಡು ಹೋಗಲು ಕಿಚನ್‍ನಿಂದ ಹಾದು ಹೊರಹೋಗಿ ತಪ್ಪಿಸಿಕೊಂಡು ಹೋಗಲು ಎರಡನೇ ಮಹಡಿಯಿಂದ ಬಿದ್ದಿದ್ದಾನೆ ಎಂದರು.
ಮಹಾಂತೇಶ್ ಪೋಲಿಸ್ ವಶದಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಕುರಿತು ಕಲಬುರ್ಗಿಯ ಚೌಕ್ ಪೋಲಿಸ್ ಠಾಣೆಯಲ್ಲಿ ಅಫಜಲಪುರ ಪೋಲಿಸರು ದೂರು ಸಲ್ಲಿಸಿದ್ದಾರೆ. ಆದಾಗ್ಯೂ, ವಿದ್ಯುತ್ ಬಿಲ್ ವಿಚಾರವಾಗಿ ಆರೋಪಿ ಬಂಧಿಸಿದ್ದು, ಆತ ತಪ್ಪಿಸಿಕೊಂಡು ಹೋಗಲು ಯತ್ನಿಸಿ ಇದೀಗ ಆಸ್ಪತ್ರೆ ಸೇರುವಂತಾಗಿದೆ. ಜೈಲಿಗೆ ಹೋಗುವ ಸಮಯದಲ್ಲಿ ಸಂಭವಿಸಿದ ಹೈಡ್ರಾಮಾ ಸ್ವತ: ಪೋಲಿಸರು ಕಂಗಾಲಾಗುವಂತೆ ಮಾಡಿದೆ.
ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಮಹಾಂತೇಶ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹಾಂತೇಶ್‍ನ ಕಾಲಿಗೆ ಬ್ಯಾಂಡೇಜ್ ಹಾಕಿದ್ದು, ಮತ್ತೊಂದೆಡೆ ದೇಹದ ತುಂಬೆಲ್ಲ ಗಾಯಗಳಾಗಿವೆ. ಎದ್ದೇಳಲು ಕೂಡ ಆಗದಂತಹ ಸ್ಥಿತಿಯಲ್ಲಿರುವ ಕುಖ್ಯಾತ ಆರೋಪಿ ಪರಿಸ್ಥಿತಿ ಮಾತ್ರ ಚಿಂತಾಜನಕವಾಗಿ, ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ.