ಹಸಿವಿನ ಆರಾಧನೆ: ೪೭ ಮಂದಿ ಸಾವು

ಮಲಿಂಡಿ (ಕೀನ್ಯಾ), ಏ.೨೪- ಕ್ರೈಸ್ತ ಬೋಧಕನೊಬ್ಬ ತನ್ನ ಅನುಯಾಯಿಗಳನ್ನು ಹಸಿವಿನಿಂದ ಸಾಯುವಂತೆ ಸೂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಕೀನ್ಯಾದ ಕರಾವಳಿ ಪಟ್ಟಣ ಮಲಿಂಡಿಯಲ್ಲಿ ಈಗಾಗಲೇ ೪೭ ಅನುಯಾಯಿಗಳ ಮೃತದೇಹಗಳನ್ನು ಮಣ್ಣಿನಿಂದ ಹೊರತೆಗೆಯಲಾಗಿದೆ. ಮೃತ ನಾಗರಿಕರಲ್ಲಿ ಮಕ್ಕಳು ಕೂಡ ಸೇರಿದ್ದು, ಮೃತದೇಹಗಳ ಹೊರತೆಗೆಯುವ ಕಾರ್ಯ ಮುಂದುವರೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚ್‌ನ ನಾಯಕ ಪಾಲ್ ಮೆಕೆನ್ಝಿ ಎನ್‌ತೆಂಗೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಇದುವರೆಗೆ ಸುಮಾರು ೫೮ ಸಮಾಧಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಒಂದು ಸಮಾಧಿಯಲ್ಲಿ ಮೂವರು ಮಕ್ಕಳು ಹಾಗೂ ಅವರ ಪೋಷಕರು ಸೇರಿದಂತೆ ಐವರ ಮೃತದೇಹ ಪತ್ತೆಯಾಗಿದೆ. ಈವರೆಗೆ ಒಟ್ಟು ೪೭ ಮಂದಿಯ ಮೃತದೇಹ ಪತ್ತೆಯಾಗಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಪ್ರಕರಣದಲ್ಲಿ ಪಾಲ್ ಮೆಕೆನ್ಝಿ ಪ್ರಮುಖ ಸೂತ್ರಧಾರ ಎನ್ನಲಾಗಿದೆ. ಈತ ತನ್ನ ತನ್ನ ಹಸಿವು ಆರಾಧನೆಯ ಭಾಗವಾಗಿ, ಯೇಸುವನ್ನು ಭೇಟಿಯಾಗಬೇಕಾದರೆ ಹಸಿವಿನಿಂದ ಇರಬೇಕು ಎಂದು ಅನುಯಾಯಿಗಳಿಗೆ ಸೂಚಿಸಿದ್ದ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದ ಅನುಯಾಯಿಗಳು ಇದೀಗ ಮೃತಪಟ್ಟಿದ್ದಾರೆ. ಅತ್ತ ಮೆಕೆನ್ಝಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು, ತಾನು ಚರ್ಚ್ ಅನ್ನು ೨೦೧೯ರಲ್ಲೇ ಮುಚ್ಚಿಸಿದ್ದೆ ಎಂದು ತಿಳಿಸಿದ್ದಾನೆ. ಇದರ ಹೊರತಾಗಿಯೂ ಆತನಿಗೆ ಜಾಮೀನು ನಿರಾಕರಿಸಲಾಗಿದೆ. ಮೂಲಗಳ ಪ್ರಕಾರ ಆಳವಿಲ್ಲದ ಸಮಾಧಿಗಳು ಶಾಕಾಹೊಲಾ ಅರಣ್ಯದಲ್ಲಿವೆ. ಕಳೆದ ವಾರ ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್‌ನ ೧೫ ಸದಸ್ಯರನ್ನು ರಕ್ಷಿಸಲಾಗಿದೆ. ಇನ್ನು ಕೀನ್ಯಾದ ದಿನಪತ್ರಿಕೆ, ದಿ ಸ್ಟ್ಯಾಂಡರ್ಡ್ ಪ್ರಕಾರ, ರೋಗಶಾಸ್ತ್ರಜ್ಞರು ಶವಗಳ ಡಿಎನ್‌ಎ ಮಾದರಿಗಳನ್ನು ತೆಗೆದುಕೊಳ್ಳಲಿದ್ದು, ಇವರೆಲ್ಲರೂ ಹಸಿವಿನಿಂದ ಸಾವನ್ನಪ್ಪಿದ್ದಾರೆಯೇ ಎಂದು ನಿರ್ಧರಿಸಲು ಪರೀಕ್ಷೆಗಳನ್ನು ನಡೆಸಲಿದ್ದಾರೆ ಎಂದು ವರದಿ ಮಾಡಿದೆ.