ಹಸಿವಿನಿಂದ ಸಾಯುತ್ತಿರುವಾಗ ಅಧಾನಿ- ಅಂಬಾನಿಗಳು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಹೆಮ್ಮೆಯೇನಲ್ಲ: ಕಾ. ಕೆ. ಉಮಾ

ಕಲಬುರಗಿ:ನ.27:ಹಸಿವಿನಿಂದ ಜನಸಾಮಾನ್ಯರು, ಹಸುಗೂಸುಗಳು ಸಾಯಿತ್ತಿರುವಾಗ, ಅಧಾನಿ-ಅಂಬಾನಿಗಳು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಹೆಮ್ಮೆಯ ವಿಷಯವಲ್ಲ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ. ಉಮಾ ಅವರು ಹೇಳಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ನಗರದ ಶಮ್ಸ್ ಫಂಕ್ಷನ್ ಹಾಲ್‍ನಲ್ಲಿ ಶನಿವಾರ ಆರಂಭಗೊಂಡ 5ನೇ ರಾಜ್ಯ ಮಟ್ಟದ ಯುವಜನ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಬದಲಿಗೆ ಎಲ್ಲರಿಗೂ ಊಟ, ವಸತಿ, ಆರೋಗ್ಯ, ಉದ್ಯೋಗ ಕೊಡುವ ಸಮಾಜವಾದಿ ಹೋರಾಟ ನಮ್ಮ ಗುರಿಯಾಗಬೇಕು ಎಂದರು.
ಬಂಡವಾಳಿಗರ ಕೃಪೆಯಿಂದ ಅಧಿಕಾರಕ್ಕೆ ಬಂದು ಅವರು ಸೇವೆಗೈಯುತ್ತಿರುವ ಇಂದಿನ ರಾಜಕೀಯ ಪಕ್ಷಗಳಿಂದ ನಾವು ಸಮಾನತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಜನರನ್ನು ಶೋಷಿಸುವ ಈ ಬಂಡವಾಳಶಾಹಿ ವ್ಯವಸ್ಥೆಯನ್ನು ಬುಡಸಹಿತ ಕಿತ್ತುಹಾಕಿ ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸುವ ಸಮಾಜವಾದಿ ಸಮಾಜವನ್ನು ಕಟ್ಟುವ ಹೋರಾಟವನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಹೇಳಿದರು.
ಎಐಡಿವೈಓ ಅಖಿಲ ಭಾರತ ಸಮಿತಿ ಅಧ್ಯಕ್ಷ ಕಾಮ್ರೇಡ್ ರಾಮಾಂಜನಪ್ಪ ಆಲ್ದಳ್ಳಿ ಅವರು ಮುಖ್ಯ ಭಾಷಣ ಮಾಡಿ, ನಮ್ಮ ಸಂಘಟನೆ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಬಗ್ಗೆ ಪೂರ್ವಗ್ರಹ ಪೀಡಿತವಾಗಿಲ್ಲ. ಆದರೆ ಆಳ್ವಿಕರು ತಪ್ಪು ಮಾಡಿದಾಗ ನಾವು ಅದನ್ನು ನೇರವಾಗಿ ಪ್ರಶ್ನಿಸುತ್ತೇವೆ. ಯುವಜನರು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಎಲ್ಲಿಯವರೆಗೆ ನಾವು ಅನ್ಯಾಯವನ್ನು ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೆ ಬದಲಾವಣೆ ಬರುವುದಿಲ್ಲ ಎಂದರು.
ನಮ್ಮದು ತರುಣ ಭಾರತ. ದೇಶದ ಜನಸಂಖ್ಯೆಯಲ್ಲಿ 25ವರ್ಷಗಳಿಗಿಂತಲೂ ಕಡಿಮೆ ವಯಸ್ಸಿರುವವರ ಪ್ರಮಾಣ ಶೇ.52ರಷ್ಟಿದೆ. ಇವರ ಪ್ರಮುಖ ಸಮಸ್ಯೆ ನಿರುದ್ಯೋಗ. ಆದರೆ ಇವರಿಗೆ ಉದ್ಯೋಗ ನೀಡಬೇಕಾದ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ. ವಿವಿಧ ಇಲಾಖೆಗಳಲ್ಲಿ ಇರುವ ಉದ್ಯೋಗಗಳನ್ನು ನಾಶಮಾಡಿವೆ. ಉದ್ಯೋಗಕ್ಕೆ ಅರ್ಹರನ್ನು ಆಯ್ಕೆ ಮಾಡುವ ಕೆ.ಪಿ.ಎಸ್.ಸಿ, ಯು.ಪಿ.ಎಸ್.ಸಿ ಯಂತಹ ಸಂಸ್ಥೆಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಇಂತಹ ಸಂದರ್ಭದಲ್ಲಿ ಯುವಜನರು ಉದ್ಯೋಗಕ್ಕಾಗಿ ವೈಯಕ್ತಿಕವಾಗಿ ಪರಿತಪಿಸದೇ ಸಂಘಟಿತ ಹೋರಾಟಕ್ಕೆ ಮುನ್ನುಗ್ಗಬೇಕು. ಅಂತಹ ಹೋರಾಟದ ರೂಪುರೇಷೆಗಳನ್ನು ಈ ಸಮ್ಮೇಳನದಲ್ಲಿ ನಿರ್ಧರಿಸಿ ರಾಜ್ಯದ ಮೂಲೆಮೂಲೆಗಳಲ್ಲಿ ಹೋರಾಟದ ಅಲೆಯನ್ನು ನೀವು ಎಬ್ಬಿಸಬೇಕು ಎಂದು ಅವರು ಕರೆ ನೀಡಿದರು.
ಅತಿಥಿಗಳಾಗಿದ್ದ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ರಮೇಶ್ ಲಂಡನಕರ್ ಅವರು ಮಾತನಾಡಿ, ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಭಗತ್‍ಸಿಂಗ್‍ರು ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಆದರೆ ಅವರ ಆದರ್ಶಗಳನ್ನು ಮರೆಮಾಚಿ ನಮ್ಮ ಯುವಜನರನ್ನು ದಿಕ್ಕು ತಪ್ಪಿಸಲಾಗಿದೆ. ನಾವು ಅವರ ವಿಚಾರಗಳನ್ನು ಯುವಜನರಿಗೆ ತಲುಪಿಸಿ ಸೈದ್ಧಾಂತಿಕ ಅಡಿಪಾಯವನ್ನು ನೀಡಿ ತಮ್ಮ ನ್ಯಾಯಯುತ ಬೇಡಿಕೆಗಳ ಹೋರಾಟಕ್ಕೆ ಸಜ್ಜುಗೊಳಿಸಬೇಕು. ಈ ಯುವಜನ ಸಮ್ಮೇಳನ ಅಂತಹ ಕಾರ್ಯಕ್ಕೆ ನಾಂದಿಯಾಗಲಿ ಎಂದು ಆಶಿಸಿದರು.
ಎಐಡಿವೈಓನ ರಾಜ್ಯ ಕಾರ್ಯದರ್ಶಿ ಕಾ. ಜಿ.ಶಶಿಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮ್ಮೇಳನದ ಧ್ಯೇಯೋದ್ದೇಶಗಳನ್ನು ಮಂಡಿಸಿದರು. ಎಐಡಿವೈಓನ ರಾಜ್ಯಾಧ್ಯಕ್ಷೆ ಕಾ. ಎಂ. ಉಮಾದೇವಿಯವರು ಅಧ್ಯಕ್ಷತೆ ವಹಿಸಿಕೊಂಡು ಕಾರ್ಯಕಲಾಪಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಬಹಿರಂಗ ಅಧಿವೇಶನದ ಪ್ರಾರಂಭದಲ್ಲಿ ಎಐಡಿವೈಓ ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಕಾ. ಪ್ರತಿಭಾ ನಾಯಕ್ ಅವರು ಸಂಘಟನೆಯ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನದ ಉದ್ಘಾಟಕರು ಮತ್ತು ಅತಿಥಿಗಳು ಹುತಾತ್ಮ ಸ್ತಂಭಕ್ಕೆ ಗೌರವ ಸಮರ್ಪಣೆ ಮಾಡಿದರು. ಗಾಯನ ತಂಡದಿಂದ ಕ್ರಾಂತಿ ಗೀತೆಗಳನ್ನು ಹಾಡಲಾಯಿತು.
ಈ ಸಂದರ್ಭದಲ್ಲಿ ಎಸ್‍ಯುಸಿಐನ ಜಿಲ್ಲಾ ಕಾರ್ಯದರ್ಶಿ ಕಾ. ಎಚ್.ವಿ. ದಿವಾಕರ್, ಎಐಡಿವೈಓನ ರಾಜ್ಯ ಉಪಾಧ್ಯಕ್ಷರುಗಳಾದ ಕಾ. ರಾಧಾಕೃಷ್ಣ ಉಪಾಧ್ಯ, ಕಾ. ಶರಣಪ್ಪ ಉದ್ಭಾಳ್, ಕಾ. ಲಕ್ಷ್ಮಣ್ ಜಡಗನ್ನವರ್ ಮೊದಲಾದ ರಾಜ್ಯ ಸಮಿತಿಯ ಸೆಕ್ರೆಟ್ರಿಯೇಟ್ ಸದಸ್ಯರು ಉಪಸ್ಥಿತರಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ನೂರಾರು ಪ್ರತಿನಿಧಿಗಳು ಹಾಗೂ ಜಿಲ್ಲೆಯ ನೂರಾರು ಯುವಜನರು ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಭಾಗವಹಿಸಿದ್ದರು.