ಹಸಿರು ಮೈಸೂರು ಮಾಡಲು ಮುಡಾ ಪಣ: ಹೆಚ್.ವಿ ರಾಜೀವ್

ಮೈಸೂರು, ಜೂ.03: `ಹಸಿರು ಮೈಸೂರು’ ಮಾಡಲು ಮುಡಾ ಪಣ ತೊಟ್ಟಿದ್ದು ಜೂನ್ 5ರ ವಿಶ್ವ ಪರಿಸರ ದಿನದಂದು ವಿವಿಧ ಜಾತಿಯ 25 ಸಾವಿರ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.
ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಾಂಗಣದಲ್ಲಿ ಅಭಿಪ್ರಾಯ ಸಂಗ್ರಹ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರುನಗರ ಪಾಲಿಕೆ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಹಸಿರು ಮೈಸೂರು ಮಾಡಲು ಸಜ್ಜಾಗಿದ್ದು, ಹಸಿರು ಮೈಸೂರು ಸಂಸ್ಥೆ ಕಳೆದ ಮೂರು ವರ್ಷಗಳಲ್ಲಿ 50 ಸಾವಿರ ಸಸ್ಯಗಳನ್ನು ಬೆಳೆಸಿದೆ. ಈ ಬಾರಿ 20 ಸಾವಿರ ಗಿಡಗಳನ್ನು ಬೆಳೆಸಲಾಗಿದೆ.
ಈ ಗಿಡಗಳನ್ನು ಜೂನ್ 5 ವಿಶ್ವಪರಿಸರ ದಿನಾಚರಣೆಯಂದು ಹಸ್ತಾಂತರ ಮಾಡಲಾಗುವುದು ಎಂದರು.
ಹಸಿರು ಮೈಸೂರು ಮಾಡಲು ಸಾರ್ವಜನಿಕ ಸಂಘ ಸಂಸ್ಥೆಗಳ ಸಹಭಾಗಿತ್ವ ಬೇಕು. ಹಲವು ಸಂಘ ಸಂಸ್ಥೆಗಳು ಮೇಲುಸ್ತುವಾರಿ ವಹಿಸುವುದಾಗಿ ಹೇಳಿದ್ದಾರೆ. ಯಾರೆಲ್ಲ ಆಸಕ್ತರು ಗಿಡಗಳನ್ನು ಪೆÇೀಷಿಸಲು ಇಷ್ಟವಿದೆಯೋ ಅವರು ಮೂಡಾ ಮತ್ತು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸುತ್ತೂರು ಶ್ರೀಗಳು, ಸಂಸದರು ಜಿಲ್ಲಾ ಉಸ್ತುವಾರಿ ಸಚಿವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಡಾ ಪ್ರಾಧಿಕಾರದ ಬಡಾವಣೆಯಲ್ಲಿ ಗಿಡ ನೆಡಲು ಗಿಡಗಳನ್ನು ಹಸಿರು ಮೈಸೂರು ವತಿಯಿಂದ ಹಸ್ತಾಂತರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹಸಿರು ಮೈಸೂರು ಸಂಸ್ಥೆಯು 2019-20ನೇ ಸಾಲಿನಲ್ಲಿ 15000ಸಸಿಗಳನ್ನು, 2020-21ನೇ ಸಾಲಿನಲ್ಲಿ 15ಸಾವಿರ ಸಸಿಗಳನ್ನು ಹಾಗೂ ಈ ಸಾಲಿನಲ್ಲಿ 20ಸಾವಿರ ಸಸಿಗಳನ್ನು ಕಳೆದ ಮೂರು ವರ್ಷಗಳಲ್ಲಿ ಒಟ್ಟು 50ಸಾವಿರ ವಿವಿಧ ಜಾತಿಯ ಸಸಿಗಳನ್ನು ಉಚಿತವಾಗಿ ಬೆಳೆಸಿ ಮೈಸೂರು ನಗರಪಾಲಿಕೆ , ಮುಡಾ, ಮತ್ತು ಆಸಕ್ತ ವೃಕ್ಷ ಪ್ರೇಮಿಗಳಿಗೆ ಸಂಸ್ಥೆಯ ವತಿಯಿಂದ ಉಚಿತವಾಗಿ ನೀಡಲಾಗುತ್ತಿದ್ದು ಈ ಸಂಸ್ಥೆಯ ಸೇವೆ ಶ್ಲಾಘನೀಯ. ನಗರ ವ್ಯಾಪ್ತಿಯಲ್ಲಿ ಉದ್ಯಾನವನಗಳಲ್ಲಿ ನೆಡಲಾಗುವ ಸಸಿಗಳಿಗೆ ಯಾವುದೇ ಸಂಘ ಸಂಸ್ಥೆ ವಾರ್ಷಿಕವಾಗಿ ನೀರೆರೆದು ಪೆÇೀಷಿಸಲು ಮುಂದೆ ಬಂದಲ್ಲಿ ಒಡಂಬಡಿಕೆ ಮಾಡಿಕೊಂಡು ಉಚಿತವಾಗಿ ನೆಡಲಾಗುವುದು ಎಂದು ತಿಳಿಸಿದರು.
ಒಟ್ಟಾರೆ ಮೈಸೂರು ನಗರವನ್ನು ಹಸಿರು ಮೈಸೂರು ಮಾಡಲು ಹೆಜ್ಜೆ ಇಡಲಾಗಿದೆ. ದೀರ್ಘಕಾಲ ಉಳಿಯುವ ಮತ್ತು ಹೆಚ್ಚು ಆಮ್ಲಜನಕ ನೀಡುವ ಅತ್ತಿ, ಮತ್ತಿ, ಬಾಗೆ, ಹಲಸು, ನೇರಳೆ, ಮಹಾಗನಿ, ಬೇವು, ಸಂಪಿಗೆ, ನಾಗಲಿಂಗ ಪುಷ್ಪ ಗಿಡ ನೆಟ್ಟು ಮರಗಳಾಗಿ ಬೆಳೆಸುವ ಯೋಜನೆ ರೂಪಿಸಲಾಗಿದೆ ಎಂದು ಹೆಚ್.ವಿ ರಾಜೀವ್ ತಿಳಿಸಿದರು.
ಪ್ರಾಧಿಕಾರದಿಂದ ನಗರ ಅರಣ್ಯೀಕರಣದತ್ತ ಹೆಜ್ಜೆ ಇಡುವ ದಿಶೆಯಲ್ಲಿ ಪ್ರಾಧಿಕಾರದ 2021-22ನೇ ಸಾಲಿನ ಅಂದಾಜು ಆಯವ್ಯಯದಲ್ಲಿ ಅಂದಾಜಿಸಿರುವ ಸಂಪನ್ಮೂಲದಲ್ಲಿ 80ಲಕ್ಷರೂ.ಗಳ ಮೊತ್ತವನ್ನು ಪ್ರಾಧಿಕಾರದಿಂದ ಮತ್ತು ಅರಣ್ಯ ಇಲಾಖೆಯಿಂದ ಸಸಿ ಬೆಳೆಸುವ ಉದ್ದೇಶಕ್ಕೆ ವಿನಿಯೋಗಿಸಲು ಉದ್ದೇಶಿಸಲಾಗಿದೆ. ಪ್ರಾಧಿಕಾರದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.00ಲಕ್ಷ ಸಸಿಗಳನ್ನು ಉದ್ಯಾನವನಗಳಲ್ಲಿ ಹಾಗೂ ತೆರೆದ ಪ್ರದೇಶಗಳಲ್ಲಿ ನೆಡಲು ಉದ್ದೇಶಿಸಲಾಗಿದ್ದು ಈ ಕಾರ್ಯಕ್ಕೆ 40ಲಕ್ಷರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ದಿಶೆಯಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳ ಪರಿಸರವಾದಿಗಳು ಪ್ರಾಧಿಕಾರದ ಜೊತೆ ಕೈಜೋಡಿಸುವಂತೆ ಮನವಿ ಮಾಡಿದರು.
ಸಾರ್ವಜನಿಕರು, ಸಂಘಸಂಸ್ಥೆಗಳು ಉಚಿತ ಸಸಿಗಳಿಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ತೋಟಗಾರಿಕಾ ಅಧಿಕಾರಿ ವಿನಯ(9880222374), ಮೈಸೂರು ಮನಪಾ ತೋಟಗಾರಿಕಾ ಅಧಿಕಾರಿ ಮಹೇಶ್ ಸ.ಕಾ.ಅ.(9740012768), ಹಸಿರು ಮೈಸೂರು ಸಂಸ್ಥೆಯ ಶೇಷ ಪ್ರಸಾದ್ (9353006616)ಇವರನ್ನು ಸಂಪರ್ಕಿಸಿ ಗಿಡಗಳನ್ನು ನೆಡುವ ಜಾಗದ ವಿವರಗಳನ್ನು ನೀಡಿ ಪಡೆಯಬಹುದಾಗಿದೆ ಎಂದರು.
ಸುದ್ದಗೋಷ್ಠಿಯಲ್ಲಿ ಮುಡಾ ಆಯುಕ್ತರಾದ ಡಾ.ಡಿ.ಬಿ.ನಟೇಶ್ ಉಪಸ್ಥಿತರಿದ್ದರು.