ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ವ್ಯತ್ಯಯ

ಬೆಂಗಳೂರು, ಅ. ೩- ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ರೀ ರೈಲು ಹಳಿ ತಪ್ಪಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ಮೈಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆಯಾದಾಗ ಅದನ್ನು ಸರಿಪಡಿಸಲು ರೀ ರೈಲನ್ನು ಬಳಸಲಾಗುತ್ತದೆ. ಇಂದು ಬೆಳಗಿನ ಜಾವ ಈ ರೀ ರೈಲು ಹಸಿರು ಮೆಟ್ರೋ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ರಾಜಾಜಿನಗರದ ಮೆಟ್ರೋ ನಿಲ್ದಾಣದ ಸಮೀಪ ಹಳಿ ತಪ್ಪಿದೆ. ಹಾಗಾಗಿ ಹಸಿರು ಮೆಟ್ರೋ ರೈಲು ಮಾರ್ಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದು, ಬೆಳಿಗ್ಗೆಯೇ ಕೆಲಸಕ್ಕೆ ತೆರಳುವವರು ಪರದಾಡುವಂತಾಗಿದೆ.ನಾಗಸಂದ್ರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ ಮೆಟ್ರೋ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದೆ.

ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆ ಉಂಟಾದಾಗ ಬಳಸುವ ರೀ ರೈಲ್ ಟ್ರ್ಯಾಕ್ ತಪ್ಪಿ ರಾಜಾಜಿನಗರ ನಿಲ್ದಾಣದ ಕರ್ವ್‌ನಲ್ಲಿ ತೊಂದರೆ ಉಂಟಾಗಿದ್ದು, ಮೆಟ್ರೋ ಸಿಬ್ಬಂದಿ ರಿಪೇರಿ ಕೆಲಸದಲ್ಲಿ ತೊಡಗಿರುವುದು.

ಹಳಿ ತಪ್ಪಿರುವ ರೀ ರೈಲನ್ನು ಹಳಿಗೆ ತರಲು ಸಿಬ್ಬಂದಿ ಹರಸಾಹಸ ನಡೆಸಿದ್ದು, ಸಂಜೆಯ ಹೊತ್ತಿಗೆ ಮೆಟ್ರೋ ಸಂಚಾರ ಸರಿ ಹೋಗಲಿದೆ ಎಂದು ಹೇಳಲಾಗಿದೆ.
ನಾಗಸಂದ್ರದಿಂದ ಯಶವಂತಪುರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಮಂತ್ರಿ ಮಹಲ್‌ಗೆ ಮಾತ್ರ ಮೆಟ್ರೋ ಸಂಚರಿಸುತ್ತಿದೆ.
ಇಂದು ನಿಗದಿತ ಸಮಯಕ್ಕೆ ಮೆಟ್ರೋ ಸಂಚರಿಸುತ್ತಿಲ್ಲ. ಅರ್ಧ ತಾಸಿಗೆ ಒಂದು ಮೆಟ್ರೋ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದೆ. ಉಳಿದಂತೆ ನೇರಳೆ ಮಾರ್ಗ ಮೆಟ್ರೋ ಸಂಚಾರ ಮಾಮೂಲಿನಂತೆ ಇದೆ.