ಹಸಿರು ಪಟಾಕಿ ಹೊಡೆದು ದೀಪಾವಳಿ ಹಬ್ಬ ಆಚರಿಸಲು ಮನವಿ

ಮಾಲೂರು.ನ೧೪.ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದಲ್ಲಿ ಪಟಾಕಿ ಮಾರಾಟ ಹಾಗೂ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ. ಪರಿಸರ ಮಾಲಿನ್ಯವಾಗದ ಹಸಿರು ಪಟಾಕಿಗಳನ್ನು ಹೊಡೆಯುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸುವಂತೆ ತಹಸೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.
ಪಟ್ಟಣದ ತಾಲೂಕು ಕಚೇರಿಯ ತಹಸೀಲ್ದಾರ್ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷವು ದೀಪಾವಳಿ ಹಬ್ಬವನ್ನು ಸಢಗರ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಈ ವರ್ಷ ದೀಪಾವಳಿ ಹಬ್ಬದ ಮೇಲೆ ಕೊರೊನಾ ಸೋಂಕಿನ ಕರಿನೆರಳು ಬಿದ್ದಿದೆ. ಪಟಾಕಿ ಹೊಡೆಯುವುದರಿಂದ ಪರಿಸರ ಮಾಲೀನ್ಯ ಜೊತೆಗೆ ಸೋಂಕು ಹರಡಲು ಅನುಕೂಲ ಕಲ್ಪಿಸಿದಂತಾಗುತ್ತದೆ. ಸೋಂಕನ್ನು ತಡೆಗಟ್ಟಲು ಆರೋಗ್ಯ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆ, ಗ್ರಾ.ಪಂ. ಅಧಿಕಾರಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸೊಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಸರಕಾರ ಪಟಾಕಿಗಳ ಮಾರಾಟ ಹಾಗೂ ಹೊಡೆಯುವುದನ್ನು ನಿಷೇಧಿಸಿದರೆ ಅದರ ಬದಲಾಗಿ ಹಸಿರು ಪಟಾಕಿಯನ್ನು ಮಾರುಕಟ್ಟೆಗೆ ತರಲಾಗಿದ್ದು, ದೀಪಾವಳಿ ಹಬ್ಬ ಆಚರಿಸುವ ನಾಗರೀಕರು ಹಸಿರು ಪಟಾಕಿ ಬಳಸಿ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಕರಿಸಬೇಕು. ಪಟಾಕಿಗಳನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿಗಳು ಅನುಮತಿ ನೀಡುತ್ತಾರೆ,ಆದರೆ ಹಸಿರು ಪಟಾಕಿಗಳ ಬದಲು ಬಾರಿ ಗಾತ್ರದ ಪಟಾಕಿಗಳನ್ನು ಮಾರಾಟ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸುವ ಮೂಲಕ ಸೋಂಕು ತಡೆಗಟ್ಟಲು ಸಹಕರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಇಒ ಕೃಷ್ಣಪ್ಪ, ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಮುಖ್ಯಾಧಿಕಾರಿ ಪ್ರಸಾದ್, ಸಿ.ಎ.ಒ ಮಂಜುನಾಥ್ ಇನ್ನಿತರರು ಹಾಜರಿದ್ದರು.