ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ

ಕೋಲಾರ,ನ.೧೫-ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಅಧಿಕೃತ ಪರವಾನಗಿ ಪಡೆದ ಮಾರಾಟಗಾರರಿಗೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಇತರೆ ಪಟಾಕಿಗಳನ್ನು ಮಾರಾಟ ಮಾಡುವುದು ಹಾಗೂ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಎಸ್. ರಾಜಶೇಖರ್ ತಿಳಿಸಿದರು.
ನಗರದಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಸಂದರ್ಭದಲ್ಲಿ ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಠಿಯಿಂದ ದೀಪಾವಳಿ ಹಬ್ಬವನ್ನು ಸರಳ ಹಾಗೂ ಅರ್ಥಗರ್ಭಿತವಾಗಿ ಭಕ್ತಿಪೂರ್ವಕವಾಗಿ ಆಚರಿಸಬೇಕು. ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳನ್ನು ಮಾರಾಟ ಮಾಡಲು ಅವಕಾಶ ಇಲ್ಲ ಎಂದು ಹೇಳಿದರು.
ಪಟಾಕಿ ಮಾರಾಟ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಟಾಕಿ ಮಾರಾಟಗಾರರ ಸಭೆ ನಡೆಸಿ ಮಾಹಿತಿ ನೀಡಲಾಗಿದ್ದು, ನ. ೧೬ರವರೆಗೆ ಮಾತ್ರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮಾರಾಟಕ್ಕೆ ಅನುಮತಿ ಪಡೆದವರು ಮಾತ್ರ ಕರೋನ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಮಾರಾಟ ಮಳಿಗೆ ತೆರೆಯಬಹುದು. ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
೪೦೨ ಕೈಗಾರಿಕೆ ಅನುಮತಿ
ಪಟಾಕಿಗಳಿಂದ ಆಗುತ್ತಿರುವ ಮಾಲಿನ್ಯ ತಡೆಯುವ ಸಲುವಾಗಿ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಸಿರು ಪಟಾಕಿ ತಯಾರಿಸಲು ನಾಗಪುರದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗೆ ಸೂಚಿಸಿತ್ತು. ಅದರಂತೆ ಸಂಸ್ಥೆಯು ಸೂತ್ರ್ತ್ರೀಕರಿಸಿ ಅಭಿವೃದ್ಧಿಪಡಿಸಿರುವ ಪಟಾಕಿಗಳನ್ನು ಸಿದ್ದಪಡಿಸಲು ೨೦೧೯ ರಲ್ಲಿ ೪೦೨ ಕೈಗಾರಿಕೆಗಳಿಗೆ ಅನುಮತಿ ನೀಡಿದೆ ಎಂದರು.
ಹಸಿರು ಪಟಾಕಿಗಳನ್ನು ಹೊಂದಿರುವ ಬಾಕ್ಸ್‌ಗಳ ಮೇಲೆ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ನೋಂದಣಿ ಹೊಂದಿರುವ ಹಸಿರು ಲಾಂಛನ, ಕ್ಯೂ ಆರ್ ಕೋಡ್ ನಮೂದಿಸಲಾಗಿರುತ್ತದೆ. ಹಸಿರು ಪಟಾಕಿಗಳು ಸಾಮನ್ಯವಾಗಿ ಬಳಕೆ ಮಾಡುವ ರಾಸಾನಿಕಗಳಾದ ಅಲ್ಯೂಮಿನಿಯಂ, ಬೇರಿಯಂ, ಪೊಟಾಷಿಯಂ ನೈಟ್ರೇಟ್ ಮತ್ತು ಕಾರ್ಬನ್ ರಹಿತ ಅಥವಾ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಲಾಗಿರುತ್ತದೆ.. ಇತರೆ ಪಟಾಕಿಗಳಿಗೆ ಹೋಲಿಸಿದಾಗ ಶೇ ೩೦ರಷ್ಟು ಕಡಿಮೆ ಧೂಳಿನ ಕಣ ಹೊರಹಾಕುತ್ತದೆ. ಶಬ್ದ ಮಟ್ಟ ೧೨೫ ಡೆಸಿಬಲ್‌ಗಿಂತ ಕಡಿಮೆ ಇರುತ್ತದೆ ಎಂದು ವಿವರಿಸಿದರು.
ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಪೌರಾಯುಕ್ತ ಶ್ರೀಕಾಂತ್ ಜಿಲ್ಲಾ ಉಪ ಪರಿಸರ ಅಧಿಕಾರಿ ಶಿವಮೂರ್ತಿ ಸುದ್ದಿ ಗೋಷ್ಠಿಯಲ್ಲಿ ಇದ್ದರು.