ಹಸಿರು ಪಟಾಕಿಗೆ ಹೈಕೋರ್ಟ್ ಅಸ್ತು; ಕಟ್ಟುನಿಟ್ಟಿನ ನಿಗಾ, ಸಾರ್ವಜನಿಕ ಅರಿವಿಗೆ ಸೂಚನೆ


ಬೆಂಗಳೂರು, ನ 13 – ಕೋವಿಡ್‌ ಸೋಂಕು ಹೆಚ್ಚಳವಾಗುವ ಭೀತಿ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ನಿಷೇಧಿಸಬೇಕು ಎಂಬ ಬೇಡಿಕೆಯ ಬೆನ್ನಲ್ಲೇ ರಾಜ್ಯ ಹೈಕೋರ್ಟ್‌, ಹಸಿರು ಪಟಾಕಿಯ ಮಾರಾಟಕ್ಕೆ ಅನುಮತಿ ನೀಡಿದೆ.

ಆದರೆ, ಯಾವುದೇ ಕಾರಣಕ್ಕೂ ಹಸಿರು ಪಟಾಕಿಗಳ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಉಂಟುಮಾಡಬಲ್ಲ ಅಂಶಗಳನ್ನು ಹೊಂದಿರುವ ಪಟಾಕಿಗಳ ಮಾರಾಟಕ್ಕೆ ಅನುವು ಮಾಡಿಕೊಡಬಾರದು. ಈ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾಡಳಿತಗಳು, ಬಿಬಿಎಂಪಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ನೇತೃತ್ವದ ನ್ಯಾಯಪೀಠ ಶುಕ್ರವಾರ ಸೂಚನೆ ನೀಡಿದೆ.

ರಾಜ್ಯ ಸರ್ಕಾರ ತನ್ನ ಹೊಸ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ, ಸಿಎಸ್‌ಐಆರ್‌-ನೀರಿ ಸಂಸ್ಥೆಗಳ ಹಸಿರು ಲೋಗೋ ಇರುವ ಮತ್ತು ಕ್ವಿಕ್‌ ರೆಸ್ಪಾನ್ಸ್‌ (ಕ್ಯೂಆರ್‌) ಕೋಡಿಂಗ್‌ ವ್ಯವಸ್ಥೆ ಇರುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಸಾರ್ವಜನಿಕರಿಗೆ ಕೂಡ ಈ ವ್ಯವಸ್ಥೆ ಇರುವ ಪಟಾಕಿಗಳನ್ನು ಮಾತ್ರ ಖರೀದಿಸುವಂತೆ ಮಾಧ್ಯಮ, ಸಾಮಾಜಿಕ ಜಾಲತಾಣಗಳನ್ನು ವಿಸ್ತೃತ ಪ್ರಚಾರ ನೀಡಿ ಮಾಹಿತಿ ಒದಗಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಗುರುವಾರ ವಿಚಾರಣೆ ವೇಳೆ ನ್ಯಾಯಪೀಠ, ಹಸಿರು ಪಟಾಕಿಗಳನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ ಎಂದು ಸರ್ಕಾರಿ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ ಹೊಸ ಅಧಿಸೂಚನೆ ಹೊರಡಿಸಿರುವ ಸರ್ಕಾರ, ಹಸಿರು ಪಟಾಕಿಗಳನ್ನು ವಿಜ್ಞಾನಿ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತು-ರಾಷ್ಟ್ರೀಯಪರಿಸರ ಮತ್ತು ಇಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ಮಾರ್ಗಸೂಚಿಗಳ ಅನುಸಾರವೇ ತಯಾರಿಸಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು.

ಈ ನಡುವೆ, ಸರ್ಕಾರಿ ವಕೀಲರು, ಬಿಬಿಎಂಪಿ ಈಗಾಗಲೇ ಪಟಾಕಿ ಮಳಿಗೆಗಳಿಗೆ ಪರವಾನಗಿ ವಿತರಿಸಿದೆ ಎಂಬ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಆಗ ನ್ಯಾಯಪೀಠ, ಪರವಾನಗಿ ನೀಡುವ ಮುನ್ನ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, ಗುರುತು ಮಾಡಿದ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಮಳಿಗೆ ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದರು.

ನಂತರ ನ್ಯಾಯಪೀಠ, ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತ, ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು, ಪೊಲೀಸರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಯೊಂದಿಗೆ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ನಿಯಮಗಳ ಪಾಲನೆ ಕುರಿತು ಪರಿಶೀಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಪಟಾಕಿ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಅರ್ಜಿದಾರರ ವಾದ ಪುರಸ್ಕರಿಸಲು ನಿರಾಕರಿಸಿದ ನ್ಯಾಯಪೀಠ, ಈ ಅರ್ಜಿ ತಡವಾಗಿ ಸಲ್ಲಿಕೆಯಾಗಿದೆ. ಆದ್ದರಿಂದ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದಿತು.

ಆದರೆ, ಸರ್ಕಾರ ಕೂಡ ಕೊನೆಯ ಕ್ಷಣದಲ್ಲಿ ಹಸಿರು ಪಟಾಕಿ ಕುರಿತು ಅಧಿಸೂಚನೆ ಹೊರಡಿಸಿರುವುದರಿಂದ ಜನರಿಗೆ ಆ ಕುರಿತು ಮಾಹಿತಿ ಲಭ್ಯವಾಗದೆ ಇರಬಹುದು. ಆದ್ದರಿಂದ ತಕ್ಷಣ ಸಾರ್ವಜನಿಕರಿಗೆ ಹಸಿರು ಪಟಾಕಿ ಹೊರತು ಉಳಿದ ಅಪಾಯಕಾರಿ ಪಟಾಕಿಯನ್ನು ಖರೀದಿಸದಂತೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತು.

ಜೊತೆಗೆ, ರಾಜ್ಯದಲ್ಲಿ ಕೇವಲ 150 ಶಬ್ದದ ಡೆಸಿಮಲ್‌ ಅಳೆಯುವ ಮಾಪನಗಳಿವೆ ಎಂಬ ಸರ್ಕಾರದ ಮಾಹಿತಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ತಕ್ಷಣ ಪೊಲೀಸ್ ಇಲಾಖೆ ಸೇರಿದಂತೆ ಅಗತ್ಯವಿರುವಲ್ಲಿ ಹೆಚ್ಚುವರಿ ಉಪಕರಣಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು. ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಜನರು ಸೇರುವ ಪ್ರದೇಶಗಳಲ್ಲಿ ಇವುಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿತು.

ಮುಂದಿನ ವಿಚಾರಣೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಮತ್ತಿತರರ ಸಂಬಂಧಿತ ಸಂಸ್ಥೆಗಳು ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.