ಕೋಲಾರ,ಏ,೮- ಭಾರತದ ಉಪಪ್ರಧಾನಿಯಾಗಿ ಹಸಿರು ಕ್ರಾಂತಿಯ ಮೂಲಕ ದೇಶದ ಹಸಿವು ನೀಗಿಸಿದ ಮಹಾನ್ ಚೇತನ ಬಾಬು ಜಗಜೀವನರಾಂ ಅವರಾಗಿದ್ದು, ಅವರ ಆದರ್ಶಗಳನ್ನು ಪಾಲಿಸುವ ಮೂಲಕ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸೋಣ ಎಂದು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಮುನಿಯಪ್ಪ ತಿಳಿಸಿದರು.
ನಗರದ ತಾಪಂ ಆವರಣದಲ್ಲಿ ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಪ್ರತಿಯೊಬ್ಬರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ಸಂದೇಶ ಸಾರಿದರು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು ಎಂದು ಬಣ್ಣಿಸಿದರು.
ಜಗಜೀವನ್ ರಾಮ್ ಅವರು ಬಿಹಾರ್‌ನಲ್ಲಿ ಜನ್ಮ ತಾಳಿದರು. ಸಮಸ್ಯೆಗಳ ನಡುವೆಯೇ ಉನ್ನತ ಮಟ್ಟಕ್ಕೆ ಏರಿದರು. ಸ್ವಾತಂತ್ರ್ಯದ ಮುಂಚೆ ಬಿಹಾರ್‌ನಲ್ಲಿ ಯಾವ ಪರಿಸ್ಥಿತಿ ಬಗ್ಗೆ ಊಹೆ ಮಾಡಿಕೊಂಡರೆ ಬೇಸರವಾಗುತ್ತದೆ. ಅಂತಹ ರಾಜ್ಯದಲ್ಲಿ ಪ್ರತಿನಿಧಿಸಿ ದೇಶದ ಉಪ ಪ್ರಧಾನಿಯಾಗಿ, ಕೃಷಿ ಸಚಿವರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ರಾಜಕೀಯ ಪ್ರವೇಶ ಮಾಡಿ ಸದನದಲ್ಲಿ ಹಸಿರು ಕ್ರಾಂತಿಗಾಗಿ ಹೋರಾಟ ಮಾಡಿದವರು. ಹಿಂದೆ ಶತೃ ರಾಷ್ಟ್ರಗಳಗಳ ಜೊತೆಗೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ರಕ್ಷಣಾ ರಚಿವರು ಆಗಿದ್ದರು. ಅವರು ಬಹಳ ಬುದ್ದಿವಂತಿಕೆಯಿಂದ ದೇಶಗಳ ನಡುವಿನ ಸಮಸ್ಯೆಯನ್ನು ಬಗೆಹರಿಸಿ ಯುದ್ಧಗಳನ್ನು ಶಾಂತಿಪಡಿಸುತ್ತಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿದರು.
ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಎನ್.ಶ್ರೀನಿವಾಸರೆಡ್ಡಿ ಮಾತನಾಡಿ, ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದರು.
ಕಡುಬಡತನದಲ್ಲಿ ಹುಟ್ಟಿ ಶ್ರದ್ಧೆಯಿಂದ ಪರಿಶ್ರಮ ಮಟ್ಟರೆ ಉನ್ನತ ಮಟ್ಟೆ ಏರಲು ಸಾಧ್ಯ. ಸಾಧನೆ ಮಾಡಲು ಬಡತನ, ಜಾತಿ, ಧರ್ಮ ಅಡ್ಡಿ ಬರುವುದಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಶಿಸ್ತು ಬದ್ಧ ಜೀವನ ರೂಪಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಸಹಾಯಕ ನಿರ್ದೇಶಕರಾದ ಅಶೋಕ್‌ಕುಮಾರ್,ಸುನೀತಾ, ತಾಲ್ಲೂಕು ಯೋಜನಾಧಿಕಾರಿ ರಮೇಶ್ ಪಿಡಿಒಗಳಾದ ಇಂದ್ರಮ್ಮ, ವತ್ಸಲಾ, ಸಿಬ್ಬಂದಿಗಳಾದ ಕರಿಬಸಪ್ಪ,ದಿನೇಶ್, ಪ್ರತ್ಯುಷಾ, ಶೈಲಜಾ, ಸೇರಿದಂತೆ ಇತರೆ ಸಿಬ್ಬಂದಿ ಹಾಜರಿದ್ದರು.