ಹಸಿರುದಳದಿಂದ ಕಸ ವಿಂಗಡಣೆಯ’ ಪಾಠ’

ದಾವಣಗೆರೆ. ನ.೨೫: ಮಹಾನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಅದರಿಂದ ಉತ್ಪತ್ತಿಯಾಗುವ ಘನ ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸುವ ನಿಟ್ಟಿನಲ್ಲಿ  ಪ್ರತಿನಿತ್ಯ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಸಿರು ದಳದ ಮರುಬಳಕೆ ಯೋಜನೆಯ ಸಂಯೋಜಕ (ರಿಸೈಕ್ಲಿಂಗ್ ಪ್ರಾಜೆಕ್ಟ್‌ ಕೋ ಆರ್ಡೀನೇಟರ್) ನವೀನ್ ಗುಬ್ಬಿ ತಿಳಿಸಿದರು.ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 32ನೇ ವಾರ್ಡಿನಲ್ಲಿನ ಜಯನಗರ ಸಿ ಬ್ಲಾಕ್ ನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಮನೆಮನೆಗೂ ತೆರಳಿದ ಅವರು, ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸುವಂತೆ ಪ್ರತಿ ಮನೆಗೆ ತೆರಳಿ ಸೂಚನೆ ನೀಡಿದರು.ಪ್ರತಿನಿತ್ಯ ನಿಮ್ಮ ಮನೆಗಳ ಮುಂದೆ ಕಸ ಸಂಗ್ರಹಿಸುವ ವಾಹನ ಬರಲಿದ್ದು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಗಾಡಿಗೆ ನೀಡಬೇಕು. ಒಂದು ವೇಳೆ ನೀವು ಕಸವನ್ನು ನೀಡದೆ ಇದ್ದರೆ ನೀವು ಕಸವನ್ನು ಎಲ್ಲಿಯೂ ಬಿಸಾಕ್ತಿದಿರಿ ಎಂದು ಅರ್ಥ. ಈ ನಿಟ್ಟಿನಲ್ಲಿ ಪಾಲಿಕೆಯು ನಿಮ್ಮ ಮನೆಗೆ ನೋಟಿಸ್ ಅನ್ನು ಕಳಿಸಲಿದೆ. ಈ ನೋಟಿಸಿಗೆ  ನೀವು ನ್ಯಾಯಾಲಯಕ್ಕೆ ಹೋಗಿ ಅಲ್ಲಿ ತಪ್ಪೋಪ್ಪಿಕೊಂಡು ಅಲ್ಲಿ ಬೇರೆ ರೀತಿಯ ಕ್ರಿಮಿನಲ್ ಗಳು ಕೈಮುಗಿದು ನಿಲ್ಲುವಂತೆ ಸಾಲಿನಲ್ಲಿ ನಿಂತುಕೊಂಡು ದಂಡ ಕಟ್ಟ ಬೇಕಾಗುತ್ತದೆ. ಆ ಕಾರಣ ನೀವು ಯಾವುದೇ ಕಾರಣಕ್ಕೂ ನಿಮ್ಮ ಮನೆ ಮುಂಭಾಗ ಬರುವ ಗಾಡಿಗಳಿಗೆ ಕಸವನ್ನು ನೀಡುವ ಮೂಲಕ ನಗರವನ್ನು ಸ್ವಚ್ಛವನ್ನಾಗಿ ಇಡಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಪರಿಸರಕ್ಕೆ ಮಾಲಿನ್ಯವಾಗುವುದಲ್ಲದೆ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಕೊಳೆಯುವಂತಹ ಕಸವನ್ನೇ ಬೇರೆ ತೆಗೆದು, ಕೊಳೆಯದೇ ಇರುವ ಕಸವನ್ನೇ ಬೇರೆ ರೀತಿಯಲ್ಲಿ ಇಡಬೇಕು. ಅಲ್ಲದೆ ಮೊಸರು, ಹಾಲಿನ ಕವರ್ ಸೇರಿದಂತೆ ಪ್ಲಾಸ್ಟಿಕ್ ಕವರಗಳನ್ನು ಚೆನ್ನಾಗಿ ತೊಳೆಬೇಕು. ಇಲ್ಲವಾದಲ್ಲಿ ಕೇವಲ 6 ರಿಂದ 7 ಗಂಟೆ ಒಳಗೆ ಅಲ್ಲಿ ಹುಳಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ನಿಮ್ಮ ಮನೆಯಲ್ಲೇ ರೋಗಗಳು ಆರಂಭವಾಗುತ್ತವೆ. ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ನೀವೇ ಕಾಯಿಲೆಗಳಿಗೆ ತುತ್ತಾಗದಂತೆ ಕಸಗಳನ್ನು ಬೇರ್ಪಡಿಸುವ ಮೂಲಕ ಸ್ವಯಂ ಪ್ರೇರಿತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಸಮಾಜವನ್ನು ಸ್ವಾಸ್ಥವಾಗಿ ಇಡಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆಯ 45 ವಾರ್ಡುಗಳನ್ನು ಪ್ರತಿನಿತ್ಯ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರಣ ಸಾರ್ವಜನಿಕರು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡಲು ಕೈ ಜೋಡಿಸಬೇಕು. ಅಲ್ಲದೆ ಕಸವನ್ನು ನಿಮ್ಮ ಮನೆಯ ಬಾಗಿಲಿಗೆ ಬರುವ ಗಾಡಿಗಳಿಗೆ ನೀಡುವ ಮೂಲಕ ನಿಮ್ಮ ಪರಿಸರವನ್ನು ಸ್ವಚ್ಛವಾಗಿರುವ ಜೊತೆಗೆ ನಗರವನ್ನು ಸ್ವಚ್ಛವಾಗಿರುವಂತೆ ಮನವಿ ಮಾಡಿದರು.ಈ ವೇಳೆ ಹಸಿರು ದಳದ ಸ್ವಯಂಸೇವಕ ಕಾರ್ಯಕರ್ತರು ಭಾಗವಹಿಸಿದ್ದರು. ಅಲ್ಲದೆ ಸ್ವಯಂಸೇವಕರು ಪ್ರತಿ ಮನೆಗೆ ಭೇಟಿ ನೀಡಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ವಿಧಾನವನ್ನು ಸಾರ್ವಜನಿಕರಿಗೆ ತಿಳಿಸಿಕೊಟ್ಟರು.