ಹಸಿರೀಕರಣದೊಂದಿಗೆ ಕೆರೆಯ ಸೌಂದರ್ಯಕ್ಕೆ ಒತ್ತು


ಹುಬ್ಬಳ್ಳಿ,ಎ.7: ಹಳೇ ಹುಬ್ಬಳ್ಳಿ ಭಾಗದಲ್ಲೇ ಅತ್ಯಂತ ಸುಂದರ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿರುವ ಕೆಂಪಕೆರೆಯಲ್ಲಿ ಪಕ್ಷಿಗಳ ಕಲರವ ಹೆಚ್ಚಿಸಲು ಕೆರೆಯ ಆವರಣವನ್ನು ಸಂಪೂರ್ಣ ಹಸಿರೀಕರಣಗೊಳಿಸಿ ಕೆರೆಯ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
5 ಕೋ.ರೂ. ವೆಚ್ಚದಲ್ಲಿ ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುತ್ತಿರುವ ಇಲ್ಲಿನ ಕಾರವಾರ ರಸ್ತೆಯ ಕೆಂಪಕೆರೆಯ ಸೌಂದರ್ಯಿಕರಣ ಕಾಮಗಾರಿಗಳನ್ನು ಮಂಗಳವಾರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಕೆರೆಯ ಮುಖ್ಯದ್ವಾರ, ಫುಟ್ ಓವರ್ ಬ್ರಿಡ್ಜ್ (ಮೇಲ್ಸೇತುವೆ), ಕೆರೆಯ ಸುತ್ತಲೂ ನಿರ್ಮಿಸುತ್ತಿರುವ ಆಕರ್ಷಕ ಕಾಂಪೌಂಡ್ ವಾಲ್, ಫುಡ್ ಕೋರ್ಟ, ಪಾಥ್‍ವೇಗೆ ಅಳವಡಿಸಿರುವ ಪೇವರ್ಸ್, ಗ್ರಿಲ್‍ಗಳನ್ನು ಪರಿಶೀಲಿಸಿದ ಶಾಸಕರು, ಫುಡ್ ಕೋರ್ಟಿನ ರೂಪಿಂಗ್, ವಾಲ್ ಕಲರ್‍ಗಳನ್ನು ರೈನ್‍ಬೋ ಮಾದರಿಯಲ್ಲಿ ವಿವಿಧ ಬಣ್ಣಗಳಿಂದ ನೋಡುಗರನ್ನು ಸೆಳೆಯುವ ರೀತಿಯಲ್ಲಿ ಆಕರ್ಷಕಗೊಳಿಸಬೇಕು. ಇನ್ನಷ್ಟು ಅನುದಾನ ಬೇಕಿದ್ದಲ್ಲಿ ಒದಗಿಸುವುದಾಗಿ ತಿಳಿಸಿದರು.
ಸಂಜೆ ವೇಳೆ ಕೆರೆಯ ಸೌಂದರ್ಯ ಮತ್ತಷ್ಟು ಇಮ್ಮಡಿಗೊಳ್ಳಲು ಕೆರೆಯ ಸುತ್ತಲೂ ಕಣ್ಮನ ಸೆಳೆಯುವ ವಿದ್ಯುದೀಪಗಳನ್ನು ಅಳವಡಿಸಬೇಕು. ಕೆರೆಯ ಮಧ್ಯ ಭಾಗದಲ್ಲಿ ಹಸಿರಿನಿಂದ ಕೂಡಿದ ನಡುಗಡ್ಡೆ ನಿರ್ಮಿಸಿ ಪಕ್ಷಿಗಳ ಕಲರವ ಹೆಚ್ಚಿಸಬೇಕು. ನೀರಿನ ಲಭ್ಯತೆಗಾಗಿ ಮತ್ತೊಂದು ಬೋರ್‍ವೆಲ್ ಕೊರೆಸುವಂತೆ ಸೂಚಿಸಿದ ಶಾಸಕರು, ಕೆಂಪಕೆರೆಗೆ ಬರುವವರಿಗೆ ವಿಶಿಷ್ಟ ಅನುಭವ ನೀಡುವ ರೀತಿಯಲ್ಲಿ ಕೆರೆಯನ್ನು ಸುಂದರವಾಗಿ ಅಭಿವೃದ್ಧಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಅಧೀಕ್ಷಕ ಇಂಜಿನಿಯರ್ ಟಿ. ತಿಮ್ಮಪ್ಪ, ಇಇ ಎಂ.ಎಂ. ಚವ್ಹಾಣ್, ಎಇಇ ಸಾಲಿ, ಎಇ ದಂಡಗಿ, ಮಿಶ್ರಿಕೋಟಿ, ಅಮ್ಮಿನಬಾವಿ & ಹೆಗಡೆ ಕನ್ಸಲ್ಟೆಂಟ್‍ನ ವೆಂಕಟೇಶ, ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಪ್ರಸನ್ನ ಮಿರಜಕರ್, ಶ್ರೀನಿವಾಸ ಬೆಳದಡಿ, ವಜೀರ್ ಧಾರವಾಡ, ಎಸ್.ಆರ್. ರಾಜು, ಶೋಭಾ ಕಮತರ, ಇತರರು ಇದ್ದರು.