ಹಸಿರೀಕರಣಕ್ಕೆ ನೂರು ಕೋಟಿ

ಬೆಂಗಳೂರು,ಜ.೨೦:ರಾಜ್ಯದಲ್ಲಿ ಹಸಿರು ಪದರ ವಿಸ್ತರಣೆಯಾಗಬೇಕು. ಆ ನಿಟ್ಟಿನಲ್ಲಿ ಹಸಿರೀಕರಣಕ್ಕೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿಂದು ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಕೆಂಪೇಗೌಡ ಗಡಿಗೋಪುರ ಮತ್ತು ನಂದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಸ್ಯ ಸಂಪತ್ತನ್ನು ಹೆಚ್ಚು ಮಾಡುವುದು ನಮ್ಮ ಉದ್ದೇಶ. ಹಸಿರು ಪದರ ವಿಸ್ತರಣೆಯಾಗಬೇಕು, ಅದಕ್ಕಾಗಿ ಹಸಿರು ಅಯವ್ಯಯವನ್ನು ರೂಪಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ೧೦೦ ಕೋಟಿ ರೂ.ಗಳನ್ನು ಹಸಿರೀಕರಣಕ್ಕೆ ಕೊಟ್ಟಿದ್ದೇನೆ. ಈ ಬಜೆಟ್‌ನಲ್ಲೂ ಹೆಚ್ಚಿನ ಅನುದಾನ ಒದಗಿಸುವುದಾಗಿ ಹೇಳಿದರು.
ಗುಡ್ಡಗಾಡು ಪ್ರದೇಶಗಳ ಸಂಪೂರ್ಣ ಹಸಿರು ಮಾಡಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ಇದರ ಜತೆಗೆ ತೋಟಗಾರಿಕೆ ವಿಸ್ತರಣೆಯೂ ಆಗಬೇಕು. ರಾಜ್ಯದೆಲ್ಲೆಡೆ ತೋಟಗಾರಿಕೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ನೀಡುವ ಚಿಂತನೆಯೂ ಇದೆ ಎಂದರು.ತೋಟಗಾರಿಕೆಯಿಂದ ಹಸಿರು ಹೆಚ್ಚುವ ಜತೆಗೆ ಅಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ. ಪೌಷ್ಠಿಕ ಆಹಾರವನ್ನು ಒದಗಿಸಲು ಸಾಧ್ಯವಿದೆ. ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.ಉದ್ಯಾನನಗರಿ ಬೆಂಗಳೂರಿನ ಗತವೈಭವವನ್ನು ಮರುಕಳಿಸುವಂತೆ ಸರ್ಕಾರ ಕ್ರಮಕೈಗೊಳ್ಳಲಿದೆ. ಬೆಂಗಳೂರಿನ ಹೊರ ವಲಯದಲ್ಲೂ ಹೊಸ ಉದ್ಯಾನಗಳನ್ನು ನಿರ್ಮಿಸುವ ಮೂಲಕ ಉದ್ಯಾನನಗರಿ ಹೆಸರನ್ನು ಖಾಯಂಗೊಳಿಸಲು ಅಗತ್ಯಕ್ರಮ ಕೈಗೊಳ್ಳುವುದಾಗಿ ಹೇಳಿದರು.ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದ ಲಾಭವನ್ನು ಜನ ಪಡೆದುಕೊಳ್ಳಬೇಕು. ಹಾಗೆಯೇ, ತಮ್ಮ ಇತಿಮಿತಿಯಲ್ಲಿ ಫಲಪುಷ್ಪಗಳನ್ನು ಬೆಳೆಸಲು ಪ್ರಯತ್ನ ಮಾಡಬೇಕು ಎಂದರು.
ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಶರವಣ, ತೋಟಗಾರಿಕೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್, ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ಉಪ ನಿರ್ದೇಶಕಿ ಜಿ.ಕುಸುಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವ ಹಿನ್ನೆಲೆ ಇಂದಿನಿಂದ ನಗರದ ಲಾಲ್‌ಬಾಗ್‌ನಲ್ಲಿ ಪ್ರಾರಂಭವಾಗಿರುವ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಉದ್ಘಾಟಿಸಿದರು, ಸಚಿವ ಮುನಿರತ್ನ ಮತ್ತಿತರರು ಇದ್ದಾರೆ.

ಬೆಂಗಳೂರು ಇತಿಹಾಸ..!
ಇಂದಿನಿಂದ ಲಾಲ್‌ಬಾಗ್‌ನಲ್ಲಿ ಉದ್ಯಾನನಗರಿಯ ಇತಿಹಾಸ ಪುಷ್ಪಗಳಲ್ಲಿ ಅನಾವರಣಗೊಂಡಿದ್ದು, ಬೆಂಗಳೂರಿನ ೧೫೦೦ ವರ್ಷಗಳ ಭವ್ಯ ಇತಿಹಾಸದ ಅವಲೋಕನ ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಅನಾವರಣ ಮಾಡಲಾಗಿದೆ.

ಪ್ಲಾಸ್ಟಿಕ್ ನಿಷೇಧ
ಉದ್ಯಾನದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಉದ್ಯಾನದ ಒಳಗೆ ತರಬಾರದು. ಇಡೀ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ತೋಟಗಾರಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪಾರ್ಕಿಂಗ್..!
ಅಲ್ ಅಮಿನ್ ಕಾಲೇಜು ಮೈದಾನ, ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ, ಜೆ.ಸಿ.ರಸ್ತೆಯ ಮಯೂರ ರೆಸ್ಟೋರೆಂಟ್ ಬಳಿಯ ಪಾಲಿಕೆ ಕಟ್ಟಡದ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಶಾಲಾ ವಾಹನ, ಅಂಗವಿಕಲರ ವಾಹನಗಳ ನಿಲುಗಡೆಗೆ ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಬೆಲೆ ಎಷ್ಟು?
ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಕಳೆದ ವರ್ಷದಂತೆ ಈ ಬಾರಿಯೂ ಟಿಕೆಟ್ ದರವನ್ನು ತಲಾ ೭೦ ಮತ್ತು ರಜಾ ದಿನಗಳಲ್ಲಿ ತಲಾ ೭೫ ನಿಗದಿಪಡಿಸಲಾಗಿದೆ. ೧೨ ವರ್ಷದೊಳಗಿನ ಮಕ್ಕಳಿಗೆ ತಲಾ ೩೦ ಇದೆ.
ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವ ೧ರಿಂದ ೧೦ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶನದ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅದಕ್ಕಾಗಿ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿ(ಐಡಿ ಕಾರ್ಡ್), ಶಾಲಾ ಆಡಳಿತ ಮಂಡಳಿ ಅನುಮತಿ ಪತ್ರದೊಂದಿಗೆ ಆಗಮಿಸಬೇಕಿದೆ.