ಹಸಿದ ಮಕ್ಕಳಿಗೆ ಹಾಲುಣಿಸಿ ಆರೋಗ್ಯವಂತ ಸಮಾಜ ನಿರ್ಮಿಸಿ :ಅಟ್ಟೂರ

ಕಲಬುರಗಿ,ಆ.21:ಹಸಿದ ಮಕ್ಕಳಿಗೆ ಹಾಲುಣಿಸುವ ಮೂಲಕ ಆ ಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ನಿಯಂತ್ರಿಸಬೇಕೆಂದು ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಹೇಳಿದರು.
ಕಲಬುರಗಿ ನಗರದ ಸಂತೋಷ ಕಾಲನಿಯ ಕೆ ಎಚ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಅಖಿಲ ಭಾರತ ಯುವಜನ ಫೆಡರೇಶನ್ ವತಿಯಿಂದ ನಾಗರ ಪಂಚಮಿ ಹಬ್ಬದ ನಿಮಿತ್ಯ ಜನ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಮಾತನಾಡುತ್ತಾ ನಮ್ಮ ಭಾಗದಲ್ಲಿ ಮಕ್ಕಳು ಹಾಲಿಲ್ಲದೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಕೇವಲ ಪಂಚಮಿ ಹಬ್ಬಕ್ಕೆ ಹಾಲು ಕುಡಿಸದೆ ಪ್ರತಿದಿನ ಬಡತನ, ನಿರ್ಗತಿಕರ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಬೇಕು. ಬಸವಣ್ಣನವರು ಹುತ್ತಿಗೆ ಹಾಲೆರದರೇನು ಫಲ? ಎಂಬ ವಚನದಲ್ಲಿ ಮೌಡ್ಯತೆಯನ್ನು ಮೀರಿ ಬೆಳೆಯಿತು ಆರೋಗ್ಯವಂತ ಸಮಾಜ ನಿರ್ಮಿಸಿಬೇಕೆಂದು ಹೇಳಿದ್ದಾರೆ. ಕಾಣದ ದೇವರಿಗೆ ಕೈ ಮುಗಿಯುವುದಕ್ಕಿಂತ ಬಡತನ ನಿರ್ಗತಿಕ ಮಕ್ಕಳಲ್ಲಿ ದೇವರನ್ನು ಕಾಣಬೇಕೆಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಂಥವರ ವಿಚಾರಧಾರೆಗಳನ್ನು ನಮ್ಮ ಜೀವನ ಅಳವಡಿಸಿಕೊಂಡು ಜೀವನ ಸಾಗಿಸಬೇಕೆಂದರು. ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿಯಾದ ಶಿವಪ್ಪ ಸುಲ್ತಾನಪುರ ಮಾತನಾಡುತ್ತಾ ಬುದ್ಧ, ಬಸವ, ಅಂಬೇಡ್ಕರ್ ಕೂಡ ಮೂಡನಂಬಿಕೆ ಹೋಗಲಾಡಿಸಲು ನಿರಂತರ ಶ್ರಮವಹಿಸಿ ತಮ್ಮ ಜೀವನವೇ ತ್ಯಾಗ ಮಾಡಿ ಅಮರರಾಗಿ ಉಳಿದಿದ್ದಾರೆ. ಇಂತಹ ಜನಜಾಗೃತಿ ಮೂಲಕ ಸಮಾಜ ಬದಲಾವಣೆ ಆಗಲೆಂದರು. ಮಹಿಳಾ ಮುಖಂಡರಾದ ಮಹಾನಂದ ಪಾಟೀಲ ಮಾತನಾಡುತ್ತಾ ಈ ಕಾರ್ಯಕ್ರಮದಲ್ಲಿ ಯಾವುದೇ ಜಾತಿ, ಮತ ಅನ್ನದೆ ಎಲ್ಲರೂ ಜೊತೆಗೂಡಿ ನಾಗರ ಪಂಚಮಿ ಹಬ್ಬ ಮಕ್ಕಳಿಗೆ ಹಾಲುಣಿಸುವ ಮೂಲಕ ಆಚರಣೆ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ. ಇಂತಹ ಕಾರ್ಯಕ್ರಮಗಳಿಂದ ವಿಶೇಷವಾಗಿ ಮಹಿಳೆಯರು ಜಾಗೃತರಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಿದ್ರಾಮಪ್ಪ ಬಾಬನಗೋಳ, ರೇಖಾ ಬಿರಾದಾರ, ನಿಲೋಫರ, ಪ್ರೀತಿ ಹೂಗಾರ, ಮಮತಾ ಪವಾರ, ನಂದೀಶ ಹೂಗಾರ, ಅಸ್ಲಾಂ ಶೇಖ, ಶಬನಾ ಶೇಖ, ಸಂಜೀವ ಕುಮಾರ ಸಲಗರ, ಮೋಹನರಾಜ ಕಲ್ಲೂರ ಕರ, ರಾಜು ಹಾಸನ, ರಾಜಕುಮಾರ ಬಿರಾದಾರ, ಲಲಿತಾ ಬಿರಾದಾರ ಸೇರಿದಂತೆ ಅನೇಕ ಜನ ಪಾಲ್ಗೊಂಡಿದ್ದರು.