ಹಸಿದವರಿಗೆ ಶಾಸಕ ಶರಣು ಸಲಗರ ಸಹಾಯ ಹಸ್ತ

ಬಸವಕಲ್ಯಾಣ:ಮೇ.31: ಕ್ಷೇತ್ರದ ಯಾವೋಬ್ಬ ಬಡವನ ಕಣ್ಣಲ್ಲೂ ನೀರು ಬರಬಾರದೆಂಬ ಪಣತೊಟ್ಟಿರುವ ನಾನು ಶಾಸಕನಾಗಿ ಅಲ್ಲ; ಒಬ್ಬ ಸೇವಕನಾಗಿ ನನ್ನ ಕೈಲಾದಷ್ಟು ನಿಮಗೆ ಸಹಾಯ ಮಾಡುವೆ ಎಂದು ಶಾಸಕ ಶರಣು ಸಲಗರ ಕ್ಷೇತ್ರದ ಜನತೆಗೆ ಭರವಸೆ ನೀಡಿದರು.
ನಿರಂತರ ಎರಡನೇ ಕಾಲಾವಧಿಗೆ ಪ್ರಧಾನಿಮಂತ್ರಿಯಾಗಿರುವ ನರೇಂದ್ರ ಮೋದಿಜಿಯವರು ಭಾನುವಾರ ತಮ್ಮ ಅಧಿಕಾರಾವಧಿ ಪೈಕಿ ಏಳು ವರ್ಷಗಳು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆ ಹಾಗೂ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಶಾಸಕರು ಭಾನುವಾರ ತಾಲ್ಲೂಕಿನ ಸಿರಗಾಪೂರ ಗ್ರಾಮದಲ್ಲಿ ಬಡವರಿಗೆ ಉಚಿತವಾಗಿ ಫುಡ್‍ಕಿಟ್‍ಗಳನ್ನು ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಿ ಸಂಕಷ್ಟದಲ್ಲಿರುವ ಜನರಿಗೆ ಅಭಯ ನೀಡಿದರು.
ಕರೊನಾ ರೋಗ ನಿರ್ಮೂಲನೆ ಮಾಡುವ ಹಂತದಲ್ಲಿ ನಾವಿದ್ದೇವೆ. ಈ ಮಹಾಮಾರಿಯಿಂದ ನಮ್ಮ-ನಿಮ್ಮ ಅನೇಕ ಸ್ನೇಹಿತರನ್ನು ಹಾಗೂ ಬಂಧುಬಳಗದವರನ್ನು ಕಳೆದುಕೊಂಡಿದ್ದೇವೆ. ಎಲ್ಲರಿಗೂ ಲಸಿಕೆ ದೊರೆಯುವಂತೆ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. ಕರೊನಾ ಸರಪಳಿ ಕಡಿಯಲು ಜನರು ಸಹಕರಿಸಬೇಕು ಎಂದರು.
ಕರೊನಾ-ಲಾಕ್‍ಡೌನ್‍ದಿಂದಾಗಿ ಕ್ಷೇತ್ರದಲ್ಲಿ ಸಾವಿರಾರು ಕೂಲಿ ಕಾರ್ಮಿಕರು, ಬಡವರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ಫುಡ್‍ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಫುಡ್‍ಕಿಟ್‍ನಲ್ಲಿ 5 ಕೆಜಿ ಅಕ್ಕಿ, ತಲಾ ಒಂದೊಂದು ಕೆಜಿ ಸಕ್ಕರೆ, ರವಾ ಹಾಗೂ ಗೋಧಿ ಹಿಟ್ಟು ಒಳಗೊಂಡಿದ್ದು, ಸಿರಗಾಪೂರ, ಕೋಹಿನೂರವಾಡಿ, ಜಾಜನಮುಗುಳಿ ಹಾಗೂ ಘೋಟಾಳ ಗ್ರಾಮಗಳಲ್ಲಿ ಒಟ್ಟು 1250 ಫುಡ್‍ಕಿಟ್‍ಗಳನ್ನು ವಿತರಿಸಲಾಯಿತು ಎಂದು ಶಾಸಕರ ಆಪ್ತರೊಬ್ಬರು ಈ ವೇಳೆ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ್ ಮಂಠಾಳಕರ್, ರಾಜಕುಮಾರ ಸಿರಗಾಪೂರ, ಹುಲಸೂರ ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ರತಿಕಾಂತ್ ಕೋಹಿನೂರ, ಸದಾನಂದ್ ಪಾಟೀಲ್, ಶಿವಾ ಕಲೋಜಿ, ಸುನಿಲ್ ಅಡೆಪಗೋಳ, ದೇವಿಂದ್ರಪ್ಪಾ ಪಾಟೀಲ್, ರಾಮಲಿಂಗ ಭೂತೆ, ಶಿವರಾಜ ಮೂಲಗೆ, ಚಂದ್ರಣ್ಣ ಶ್ರೀಚಂದ್, ಈಶ್ವರಯ್ಯ ಮಠಪತಿ, ಶಿವಾನಂದ್ ಪಾಟೀಲ್, ರಾಮು ಬಿರಾದಾರ, ಶಂಕರ ನಾಗದೆ, ಪ್ರದೀಪ್ ಗಡವಂತೆ, ಶಹಾಜಿ ಭೋಸ್ಲೆ, ಧನರಾಜ ಜಾಧವ, ಸೋಮನಾಥ ಮುಕ್ತಾ, ಸಚಿನ್ ಪಾಟೀಲ್ ಇನ್ನಿತರರಿದ್ದರು.