ಹಸಿದವರಿಗೆ ಅನ್ನ…’ : ಶಿವಮೊಗ್ಗ ನಗರದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ!

ಶಿವಮೊಗ್ಗ. ಕೊ.೨೦; ಕೊರೊನಾ ಎರಡನೇ ಅಲೆಗೆ ಇಡೀ ದೇಶ-ರಾಜ್ಯ ತತ್ತರಿಸುತ್ತಿದೆ.
ಸೋಂಕಿನಿಂದ ಉಂಟಾಗುತ್ತಿರುವ ಸಾವು-ನೋವು ನಾಗರೀಕರ ನಿದ್ದೆಗೆಡಿಸಿದೆ. ಸೊಂಕು
ಹರಡುವಿಕೆ ತಡೆಯಲು ಲಾಕ್ಡೌನ್, ಕರ್ಫ್ಯೂ ಜಾರಿಗೊಳಿಸಲಾಗಿದೆ. ಜನರ ಜೀವ ರಕ್ಷಣೆಗಾಗಿ
ಆಡಳಿತ ಇನ್ನಿಲ್ಲದ ಹರಸಾಹಸ ನಡೆಸುತ್ತಿದೆ.
ಮತ್ತೊಂದೆಡೆ, ಸ್ತಬ್ದಗೊಂಡಿರುವ ದೈನಂದಿನ ವ್ಯವಸ್ಥೆಯಿಂದ ಜನಸಾಮಾನ್ಯರ ದೈನಂದಿನ
ಬದುಕು ಅಸ್ತವ್ಯಸ್ತವಾಗಿದೆ. ಸಹಜವಾಗಿಯೇ ಬಡವರು, ಅಶಕ್ತರು, ಜೋಪಡಿಗಳಲ್ಲಿ
ವಾಸಿಸುತ್ತಿರುವವರು, ದಿನ ದುಡಿದು ಜೀವನ ಸಾಗಿಸಬೇಕಾದ ಸ್ಥಿತಿಯಲ್ಲಿರುವ ಕುಟುಂಬಗಳ
ಸಂಕಷ್ಟ ಹೇಳತೀರದಾಗಿದೆ. ಹಲವರಿಗೆ ಬದುಕು ಭಾರವಾಗಿ ಪರಿಣಮಿಸುತ್ತಿದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ‘ಹಸಿದವರಿಗೆ ಅನ್ನ’ ನೀಡುವ ಹಾಗೂ ದೈನಂದಿನ ಜೀವನಕ್ಕೆ
ಅವಶ್ಯವಾದ ಆಹಾರ ಸಾಮಗ್ರಿ ವಿತರಿಸುವ ಮಹತ್ತರ ಕಾರ್ಯದಲ್ಲಿ ಹಲವು ಸಂಘಸಂಸ್ಥೆಗಳು,
ರಾಜಕೀಯ ಪಕ್ಷಗಳು, ಸಾರ್ವಜನಿಕರು ತೊಡಗಿಸಿಕೊಂಡಿದ್ದಾರೆ. ಅಗತ್ಯವಿರುವವರಿಗೆ
ಅವರಿರುವ ಸ್ಥಳಗಳಿಗೆ ತೆರಳಿ ಆಹಾರ ಸಾಮಗ್ರಿ, ಊಟ-ಉಪಹಾರದ ಪ್ಯಾಕೆಟ್ ಗಳ ವಿತರಣೆ
ಮಾಡುತ್ತಿದ್ದಾರೆ.
ಅದರಲ್ಲಿಯೂ ಶಿವಮೊಗ್ಗ ನಗರದಲ್ಲಿ, ದಿನದಿಂದ ದಿನಕ್ಕೆ ಅನ್ನದಾನಿಗಳ ಸಂಖ್ಯೆ
ಹೆಚ್ಚಾಗುತ್ತಿದೆ. ಇದರಿಂದ ಪ್ರತಿನಿತ್ಯ ಸಾವಿರಾರು ಜನರಿಗೆ ಅನ್ನಾಹಾರ, ದಿನಸಿ
ಸಾಮಗ್ರಿಗಳು ಲಭ್ಯವಾಗುವಂತಾಗಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್
ಗಳಲ್ಲಿ ಬೆಳಿಗ್ಗೆ-ಮಧ್ಯಾಹ್ನ-ರಾತ್ರಿ ಉಚಿತ ಊಟೋಪಚಾರದ ವ್ಯವಸ್ಥೆ
ಜಾರಿಗೊಳಿಸಿರುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತಿದೆ.
ಅವಿರತ ಸೇವೆ: ಕೆಲ ಸಂಘಸಂಸ್ಥೆ, ರಾಜಕೀಯ ಪಕ್ಷಗಳು ಲಾಕ್ಡೌನ್ ಜಾರಿಯಾದ ದಿನದಿಂದಲೂ
ಹಸಿದವರಿಗೆ ಅನ್ನ ಸೇವೆಯ ಕಾರ್ಯದಲ್ಲಿ ತಲ್ಲೀನವಾಗಿವೆ. ಹಾಗೆಯೇ ಕೆಲ ನಾಗರೀಕರು ಎಲೆ
ಮರೆಯ ಕಾಯಿಯಂತೆ ತಮ್ಮ ಕೈಲಾದ ನೆರವಿನಹಸ್ತ ಚಾಚುತ್ತಿದ್ದಾರೆ. ಇಂತಹ ಸಾಕಷ್ಟು
ಮಾನವೀಯ ಕಾರ್ಯಗಳು ನಗರಾದ್ಯಂತ ಸದ್ದಿಲ್ಲದೆ ನಡೆದುಕೊಂಡು ಬರುತ್ತಿದೆ.
‘ಕೊರೊನಾ ಸೋಂಕು ಊಹಿಸಲಾಗದ ಮಟ್ಟಕ್ಕೆ ಬದುಕಿನ ಮೇಲೆ ಪ್ರಭಾವ ಬೀರಿದೆ. ಇಂತಹ ವೇಳೆ
ಅದೆಷ್ಟೊ ದಾನಿಗಳು ಅಶಕ್ತ ವರ್ಗಗಳಿಗೆ ಊಟೋಪಚಾರ, ದೈನಂದಿನ ಜೀವನಕ್ಕೆ ಅನುಕೂಲವಾಗುವ
ಆಹಾರ ಸಾಮಗ್ರಿ ವಿತರಿಸುವ ಕಾರ್ಯದಲ್ಲಿ ತಲ್ಲೀನವಾಗಿದ್ದಾರೆ. ನಿಜಕ್ಕೂ ಇದು
ಅಭಿನಂದನೀಯ ಕಾರ್ಯವಾಗಿದೆ. ಈ ರೀತಿಯ ಮಾನವೀಯ ಕೆಲಸಕಾರ್ಯಗಳು ಹೆಚ್ಚಾಗಬೇಕಾಗಿದೆ’
ಎಂದು ಪ್ರಜ್ಞಾವಂತ ನಾಗರೀಕರು ಹೇಳುತ್ತಾರೆ.