ಹವಾಯಿಗೆ ತೆರಳಲು ಬೈಡೆನ್ ಒಪ್ಪಿಗೆ

ಹವಾಯಿ (ಅಮೆರಿಕಾ), ಆ.೧೬- ಹವಾಯಿಯಲ್ಲಿ ಸಂಭವಿಸಿರುವ ಭೀಕರ ಕಾಡ್ಗಿಚ್ಚಿನ ಹೊರತಾಗಿಯೇ ಅಧ್ಯಕ್ಷ ಜೋ ಬೈಡೆನ್ ಇನ್ನೂ ಸಂತ್ರಸ್ತಪೀಡಿತ ಪ್ರದೇಶಗಳಿಗೆ ಭೇಟಿ ನೀಡದಿರುವುದು ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೊನೆಗೂ ಸಂತ್ರಸ್ತಪೀಡಿತ ಪ್ರದೇಶಗಳಿಗೆ ಸದ್ಯದಲ್ಲೇ ಭೇಟಿ ನೀಡುವ ಬಗ್ಗೆ ಬೈಡೆನ್ ತಿಳಿಸಿದ್ದಾರೆ.
ಮಿಲ್ವಾಕೀಯಲ್ಲಿ ಈ ಬಗ್ಗೆ ಮಾತನಾಡಿದ ಬಿಡೆನ್, ರಾಜ್ಯದ ಜನರಿಗೆ ಅಗತ್ಯ ಇರುವ ಎಲ್ಲಾ ಸವಲತ್ತುಗಳನ್ನು ಹೊಂದಿದ್ದಾರೆ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಮಾನವೀಯ ಪ್ರತಿಕ್ರಿಯೆಯಿಂದ ಸಂಪನ್ಮೂಲಗಳು ಮತ್ತು ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ ಎಂಬ ಕಳವಳದಿಂದಾಗಿ ನಾನು ಇನ್ನೂ ಸಂತ್ರಸ್ತಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರಲಿಲ್ಲ. ಸದ್ಯ ನಡೆಯುತ್ತಿರುವ ಪರಿಹಾರ ಕಾರ್ಯಗಳಿಗೆ ತೊಂದರೆ ತರಲು ನಾನು ಬಯಸಿರಲಿಲ್ಲ. ಹಾಗಾಗಿ ಜಿಲ್ ಬೈಡೆನ್ ಜೊತೆಗೂಡಿ ಸದ್ಯದಲ್ಲೇ ಹವಾಯಿಗೆ ತೆರಳಲಿದ್ದೇನೆ. ಈಗಾಗಲೇ ಸಂತ್ರಸ್ತಪೀಡಿತ ಪ್ರದೇಶದಲ್ಲಿ ಸಹಾಯ ಮಾಡಲು ಹೆಚ್ಚುವರಿ ಸಿಬ್ಬಂದಿಯನ್ನು ಮಾಯಿಗೆ ಕಳುಹಿಸಲಾಗುತ್ತಿದೆ. ಅಮೆರಿಕಾದ ಮಿಲಿಟರಿ ಮತ್ತು ಕೋಸ್ಟ್ ಗಾರ್ಡ್ ಸೇರಿದಂತೆ ಲಭ್ಯವಿರುವ ಎಲ್ಲಾ ಫೆಡರಲ್ ಸ್ವತ್ತುಗಳನ್ನು ಪರಿಹಾರ ಕಾರ್ಯದಲ್ಲಿ ಬಳಸಲಾಗುವುದು. ಇದು ಶ್ರಮದಾಯಕ ಕೆಲಸವಾಗಿದ್ದು, ಹಾಗಾಗಿ ಸಮಯ ತೆಗೆದುಕೊಳ್ಳುತ್ತದೆ ಎಂದು ಬೈಡೆನ್ ತಿಳಿಸಿದ್ದಾರೆ. ಇನ್ನು ಈತನಕ ದುರಂತದಲ್ಲಿ ೧೦೧ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು ೧೩೦೦ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಹಾಗಾಗಿ ದುರಂತದಲ್ಲಿ ಮೃತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ದುರಂತದ ಬಳಿಕ ಫೆಡರಲ್ ಸರ್ಕಾರ ತೆಗೆದುಕೊಂಡ ನಿಧಾನಗತಿಯ ಕ್ರಮಗಳ ಬಗ್ಗೆ ಹವಾಯಿ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.