ಹವಾಮಾನ ಶೃಂಗಸಭೆ; ಪ್ರಧಾನಿ ಮೋದಿ ಸೇರಿ ೪೦ ವಿಶ್ವನಾಯಕರಿಗೆ ಬೈಡನ್ ಆಹ್ವಾನ

ವಾಷಿಂಗ್ಟನ್ , ಮಾ. ೨೭: ಅಮೆರಿಕದಲ್ಲಿ ಬರುವ ಏಪ್ರಿಲ್ ೨೨ರಿಂದ ಆರಂಭವಾಗುವ ಎರಡು ದಿನಗಳ ಹವಾಮಾನ ಕುರಿತ ನಾಯಕರ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ೪೦ ಮಂದಿ ವಿಶ್ವ ಮುಖಂಡರನ್ನು ಆಹ್ವಾನಿಸಿದ್ದಾರೆಂದು ಶ್ವೇತಭವನ ಪ್ರಕಟಿಸಿದೆ.
ವರ್ಚುವಲ್ ವಿಧಾನದಲ್ಲಿ ನಡೆಯುವ ಈ ಶೃಂಗಸಭೆಯ ಕಲಾಪ ಸಾರ್ವಜನಿಕ ವೀಕ್ಷಣೆಗಾಗಿ ದೃಶ್ಯ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ. ಈ ಮಹತ್ವದ ಶೃಂಗಸಭೆಗೆ ಭಾರತದ ಪ್ರಧಾನಿ ಮೋದಿ ಆಗಮಿಸಬೇಕೆಂದು ಜೋ ಬೈಡನ್ ಮನವಿ ಮಾಡಿದ್ದಾರೆ.
ಹವಾಮಾನಕ್ಕೆ ಸಂಬಂಧಿಸಿದಂತೆ ಪ್ರಬಲವಾದ ಕ್ರಮ ಕೈಗೊಳ್ಳಬೇಕಾದ ತುರ್ತು ಮತ್ತು ಈ ಕ್ರಮಗಳ ಆರ್ಥಿಕ ಲಾಭವನ್ನು ಪಡೆದುಕೊಳ್ಳುವ ಸಂಬಂಧ ವಿಶ್ವ ನಾಯಕರು ಈ ವೇದಿಕೆಯಲ್ಲಿ ಚರ್ಚಿಸಲಿದ್ದಾರೆ. ವಿಶ್ವಸಂಸ್ಥೆ ಈ ವರ್ಷದ ಗ್ಲಾಸ್ಗೋದಲ್ಲಿ ಆಯೋಜಿಸಿರುವ ಹವಾಮಾನ ಬದಲಾವಣೆ ಸಮ್ಮೇಳನ-ಸಿಓಪಿ ೨೬ನ ಮಾರ್ಗದಲ್ಲಿ ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ ಎಂದು ಶ್ವೇತಭವನ ಬಣ್ಣಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ , ಜಪಾನ್ ಪಿಎಂ ಯೆಶಿಹಿದೆ ಸುಗಾ, ಬ್ರೆಜಿಲ್ ಅಧ್ಯಕ್ಷ ಜೈರ್ ಜೈರ್ ಬೊಲ್ಸ್ ನರೊ, ಕೆನಡಾ ಪ್ರಧಾನಿ ಜೆಸ್ಟಿನ್ ಟ್ರುಡೇವ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನೂ ಆಹ್ವಾನಿಸಲಾಗಿದೆ.