ಹವಾಮಾನ ರಕ್ಷಣೆಗೆ ಬದ್ಧರಾಗೋಣ- ಡಾ.ಆರ್.ಎಚ್.ಪಾಟೀಲ

ಧಾರವಾಡ, ಮಾ. 25: ಹವಾಮಾನ ಬದಲಾವಣೆ ಜನರ ಜೀವನದ ಮೇಲೆ ಅತೀ ಹೆಚ್ಚಿನ ಪ್ರಭಾವವನ್ನು ಬೀರುತ್ತಿದೆ. ಹವಾಮಾನ ಮುನ್ಸೂಚನೆಯು ನಗರ ಆಡಳಿತದಲ್ಲಿ ಮತ್ತು ನೈಸರ್ಗಿಕ ವಿಪತ್ತುಗಳ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಕೃಷಿಗೆ ದೀರ್ಘಾವಧಿಯ, ಮಧ್ಯಮ ಹಾಗೂ ಕಡಿಮೆ ಅವಧಿಯ ಹವಾಮಾನ ಮುನ್ಸೂಚನೆ ಅಗತ್ಯವಿರುವುದರಿಂದ ರೈತರಿಗೆ ಹವಾಮಾನ ಶಾಸ್ತ್ರದ ಅರಿವು ಮುಖ್ಯವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಎಚ್. ಪಾಟೀಲ ಹೇಳಿದರು

ಕೃಷಿ ವಿಶ್ವವಿದ್ಯಾಲಯದ ಸಂಭಾಗಣದಲ್ಲಿ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಹವಾಮಾನಶಾಸ್ತ್ರ ವಿಭಾಗ ಮತ್ತು ಉತ್ತರ ಕರ್ನಾಟಕ ಕೃಷಿ ಹವಾಮಾನ ಮತ್ತು ಸಂಶೋಧನಾ ಕೇಂದ್ರ, ಭಾರತ ಹವಾಮಾನ ಇಲಾಖೆ ಇವರ ಸಹಯೋಗದಲ್ಲಿ ನಡೆದ ಜಾಗತಿಕ ಹವಾಮಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಗರ ನೀರು ನಿರಂತರವಾಗಿ ಆವಿಯಾಗುತ್ತಿದೆ. ಸುತ್ತಮುತ್ತಲಿನ ಗಾಳಿಯ ಉಷ್ಣತೆ ಮತ್ತು ತೇವಾಂಶವನ್ನು ಹೆಚ್ಚಿಸಿ ಮಳೆ ಮತ್ತು ಬಿರುಗಾಳಿಗಳನ್ನು ರೂಪಿಸುತ್ತಿದೆ. ಸಾಗರವು ವಿಶ್ವದ ಹವಾಮಾನ ಮತ್ತು ವಾಯುಗುಣದ ಪ್ರಮುಖ ಜಾಲವಾಗಿದೆ. ಸಾಗರವು ಜಾಗತಿಕ ಆರ್ಥಿಕತೆಯ ಪ್ರಮುಖ ಕಾರಣವಾಗಿದ್ದು, 100 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಶೇ.40 ಮಾನವೀಯತೆಯನ್ನು ಉಳಿಸಿಕೊಂಡಿದೆ. ಮಾನವ ಪ್ರೇರಿತ ಹವಾಮಾನ ಬದಲಾವಣೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಾಗರವನ್ನು ಅಧ್ಯಯನ ಮಾಡುವುದು ಅವಶ್ಯಕ. ವಿಶ್ವ ಹವಾಮಾನ ಸಂಶೋಧನ ಕಾರ್ಯಕ್ರಮವು ಸಾಗರ ಮತ್ತು ಹವಾಮಾನದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳವ ಪ್ರಯತ್ನವನ್ನು ಸಂಘಟಿಸುತ್ತಿದೆ. ಅವುಗಳ ಪರಸ್ಪರ ಕ್ರಿಯೆಯು ವಿಪರೀತ ಘಟನೆಗಳಿಗೆ ಹೇಗೆ ಕಾರಣವಾಗುತ್ತದೆ. ಎಂದು ತಿಳಿಸಿ ಮಾನವೀಯತೆಯು ಹಸಿರು ಮನೆ ಅನಿಲಗಳಿಂದ ಸಿಕ್ಕಿ ಹಾಕಿಕೊಳ್ಳುತ್ತಿರುವ ಹೆಚ್ಚಿನ ಶಾಖವನ್ನು ಸಾಗರವು ಸಂಗ್ರಹಿಸುತ್ತದೆ ಮತ್ತು ಹವಾಮಾನ ಬದಲಾವಣೆ ಹೇಗೆ ಪ್ರಗತಿಯಲ್ಲಿದೆ ಎಂಬುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಾನವ ಚಟುವಟಿಕೆಗಳಿಂದ ಹೊರ ಸೂಸಲ್ಪಟ್ಟ ಕೆಲವು ಇಂಗಾಲ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಸಮುದ್ರದ ನೀರು ಹೆಚ್ಚು ಆವಿಯಾಗುತ್ತದೆ. ಹೀಗಿರುವಾಗ ವಿಶ್ವ ಹವಾಮಾನ ದಿನಾಚರಣೆಯ 2021 ರ ಘೋಷವಾಕ್ಯವು “ಸಾಗರ, ನಮ್ಮ ವಾಯುಗುಣ ಮತ್ತು ಹವಾಮಾನ” ಎಂಬುದಾಗಿದೆ. ನಮ್ಮ ಉಳಿವಿಗಾಗಿ ಪ್ರಕೃತಿಯನ್ನು ಉಳಿಸೋಣ, ಹವಾಮಾನ ರಕ್ಷಣೆಗೆ ಬದ್ಧರಾಗೋಣ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಪಿ.ಎಲ್. ಪಾಟೀಲ್ ಮಾತನಾಡಿ ಸೌರ ವಿಕಿರಣವನ್ನು ಸಂಗ್ರಹಿಸಿ ಜಗತ್ತಿನಾದ್ಯಂತ ಶಾಖ ಮತ್ತು ತೇವಾಂಶವನ್ನು ವಿತರಿಸುವ ಮೂಲಕ ಸಾಗರವು ಹವಾಮಾನ ಮತ್ತು ಹವಾಗುಣದ ಮೇಲೆ ಪ್ರಭಾವ ಬೀರುತ್ತದೆ, ಕಲುಷಿತ ವಾತಾವರಣ ಹಾಗೂ ಹೆಚ್ಚುತ್ತಿರುವ ತಾಪಮಾನ ಅತಿಯಾದ ಸಮುದ್ರ ಆಹಾರ ಜೀವಿಗಳ ಬೇಟೆಯಿಂದ ನಶಿಸುತ್ತಿರುವ ಜಲಚರ ಸಂಕುಲವನ್ನು ಸಂರಕ್ಷಿಸುವ ಕಾರ್ಯವಾಗಬೇಕಿದೆ ಎಂದರು.

ಉತ್ತರ ಕರ್ನಾಟಕ ಕೃಷಿ ಹವಾಮಾನ ಹಾಗೂ ಸಂಶೋಧನ ಕೇಂದ್ರದ ಉಸ್ತುವಾರಿ ಅಧಿಕಾರಿಗಳಾದ ಡಾ.ರಾಜು ರೋಖಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಾರ್ಚ್ 23  ವಿಶ್ವ ಹವಾಮಾನ ದಿನಾಚರಣೆಯಾಗಿ ಆಚರಿಸುತ್ತಿದ್ದು. ವಿಶ್ವ ಹವಾಮಾನ ಸಂಸ್ಥೆ 192 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಅಂತರ ಸರ್ಕಾರಿ ಸಂಸ್ಥೆಯಾಗಿದೆ. 1873 ರಲ್ಲಿ ರಚನೆಯಾದ ಅಂತರಾಷ್ಟ್ರೀಯ ಹವಾಮಾನ ಸಂಸ್ಥೆಯು, 1950 ಮಾರ್ಚ್ 23 ರಿಂದ ಪ್ರತಿವರ್ಷ ಈ ದಿನವನ್ನು ಹವಾಮಾನ ದಿನಾಚರಣೆಯಾಗಿ ಆಚರಿಸಿ, ಜನರ ಸುರಕ್ಷೆ ಮತ್ತು ಕ್ಷೇಮಕ್ಕೆ ಹವಾಮಾನದ ಕೊಡುಗೆ ಮಹತ್ವದ ಜಾಗೃತಿ ಮೂಡಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಎನ್.ಕೆ.ಎ.ಎಫ್.ಸಿ ಕೇಂದ್ರದ ಕೃಷಿ ಹವಾಮಾನ ವಿಜ್ಞಾನಿ ಸಹನಾ ಹೆಗಡೆ ಅವರು ಇಲಾಖೆಯ ಕಾರ್ಯಚಟುವಟಿಕೆ ಹಾಗೂ ಹವಾಮಾನ ವಿಷಯವಾಗಿ ಸಾರ್ವಜನಿಕರು ವಹಿಸಬೇಕಾದ ಜವಾಬ್ದಾರಿ   ಕುರಿತು   ಮಾತನಾಡಿದರು.  

ಡಾ. ಕೆ.ಜಿ. ಸುಮೇಶ, ಡಾ.ಯು.ಕೆ. ಶಾನವಾಡ, ಡಾ. ಶೇಖಪ್ಪ, ಎಚ್.ಸಿ. ಹುಣಸೀಮರದ್, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿಧ್ಯಾರ್ಥಿನಿಯರು ಹಾಗೂ ಕೃಷಿಕ ಮಿತ್ರರು ಉಪಸ್ಥಿತರಿದ್ದರು.

ವಿಜಯಕುಮಾರ ಪ್ರಾರ್ಥಿಸಿದರು, ಸಿ.ಬಿ. ಕಬಾಡಗಿ ಸ್ವಾಗತಿಸಿದರು, ಡಾ.ಬಸವರಾಜ ರಾಜೂರ ವಂದಿಸಿದರು, ಡಾ. ರಾಜು ರೋಖಡೆ ನಿರೂಪಿಸಿದರು.