ಹವಾಮಾನ ಮತ್ತು ಪರಿಸರ ಶಿಕ್ಷಣ ಕುರಿತು ತರಬೇತಿ ಕಾರ್ಯಕ್ರಮ

ಬಳ್ಳಾರಿ,ಜ.12- ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ಯುನಿಸೆಫ್ ಇವರ ಸಂಯುಕ್ತಾಶ್ರಯದಲ್ಲಿ 2 ದಿನಗಳ ಹವಾಮಾನ ಮತ್ತು ಪರಿಸರ ಶಿಕ್ಷಣ ಕುರಿತು ತರಬೇತಿ ಕಾರ್ಯಕ್ರಮವನ್ನು ಬುಧವಾರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಪ್ರಾಧ್ಯಾಪಕರುಗಳಿಗೆ ಹಮ್ಮಿಕೊಳ್ಳಲಾಗಿತ್ತು.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಸಿದ್ದು ಪಿ.ಆಲಗೂರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಿಸರ ರಕ್ಷಣೆ ನಮ್ಮ ಎಲ್ಲರ ಆದ್ಯ ಕರ್ತವ್ಯ, ಇಂದಿನ ದಿನಗಳಲ್ಲಿ ಒಬ್ಬೊಬ್ಬರು ಒಂದೊಂದು ನಾಲ್ಕು ಚಕ್ರದ ವಾಹನಗಳನ್ನು ತರುತ್ತೇವೆ ಆದರೆ ಹೆಚ್ಚಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉಪಯೋಗಿಸಿಕೊಳ್ಳುವ ಮನಸ್ಥಿತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಹವಾಮಾನವು ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಬದಲಾವಣೆಯನ್ನು ಹೊಂದುತಿದ್ದು, ಅದನ್ನು ನಾವು 1.5 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಿನ ಪ್ರಮಾಣಕ್ಕೆ ಹೋಗದಂತೆ ತಡೆಯಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕಳೆದೆರಡು ದಶಕಗಳಲ್ಲಿ ಅತ್ಯಂತ ವೇಗವಾಗಿ ಹವಾಮಾನ ಬದಲಾಗುತ್ತಿರುವುದು ನಮ್ಮ ಜೀವನ ಶೈಲಿಯೇ ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
 ಪ್ರಪಂಚದ 100 ದೇಶಗಳು ಶೇ.3ರಷ್ಟು ಹವಾಮಾನ ವೈಪರಿತ್ಯಕ್ಕೆ ಕಾರಣವಾಗುತ್ತಿದ್ದರೆ, 10 ದೇಶಗಳು ಶೇ.68ರಷ್ಟು ಹವಾಮಾನ ವೈಪರಿತ್ಯಕ್ಕೆ ಕಾರಣವಾಗುತ್ತಿವೆ. ಈ ಅಂಶಗಳನ್ನು ಆಧರಿಸಿ ನಾವು ಯಾವ ಸಾಲಿನಲ್ಲಿ ನಿಲ್ಲಬೇಕು ಎಂದು ವಿವೇಚಿಸಿ ಪರಿಸರ ಸುಸ್ಥಿರತೆಯೆಡೆಗೆ ಎಲ್ಲರೂ ಒಟ್ಟಾಗಿ ಕಾರ್ಯೋನ್ಮುಖರಾಗಿ ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂಸ್ಥೆಗಳ ಸಹಯೋಗದಲ್ಲಿ ಕಾಲೇಜು ಮಟ್ಟದ ತರಬೇತಿ ಕಾರ್ಯಕ್ರಮಗಳಿಗೆ ವತಿಯಿಂದ ಎಲ್ಲಾ ರೀತಿಯ ತಾಂತ್ರಿಕ ಹಾಗೂ ಸಂಪನ್ಮೂಲ ವ್ಯಕ್ತಿಗಳ ಸಹಕಾರವನ್ನು ನಿಡಲಾಗುವುದು ಹಾಗೂ ಅಗತ್ಯವಿದ್ದಲ್ಲಿ ವಿಶ್ವವಿದ್ಯಾಲಯದ ವತಿಯಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ ಹಾಗೂ ನೆರವನ್ನು ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯುನಿಸೆಫ್ ಕನ್ಸಲ್ಟಂಟ್ ದಿಲಿಪ್.ಸಿ.ಎಸ್ ಅವರು ಮಾತನಾಡಿ, ಯುನಿಸೆಫ್ ಸಂಸ್ಥೆಯು ಪರಿಸರ ಶಿಕ್ಷಣ ಕೇಂದ್ರ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಇವರ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ಕರ್ನಾಟಕ  ರಾಜ್ಯದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಯೋಜನೆಯ ಭಾಗವಾಗಿ ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ 80 ತರಬೇತುದಾರರಿಗೆ ಈಗಾಗಲೇ ಈ ತರಬೇತಿಯನ್ನು ನೀಡಲಾಗಿದ್ದು, ಇದರ ಮುಂದಿನ ಭಾಗವಾಗಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ 350 ಉಪನ್ಯಾಸಕರುಗಳಿಗೆ ಈ ವಿಷಯದ ಕುರಿತಾಗಿ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಯುವ ರೆಡ್‍ಕ್ರಾಸ್ ಘಟಕದ ನೋಡಲ್ ಅಧಿಕಾರಿ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶಶಿಕಾಂತ್ ಮಜ್ಜಿಗೆ, ಡಾ.ನಾಗಭೂಷಣ್, ಬೆಂಗಳೂರು ಪರಿಸರ ಶಿಕ್ಷಣ ಕೇಂದ್ರದ ತರಬೇತಿ ಸಂಯೋಜಕರಾದ ಡಾ. ಶೃತಿ, ಶುದ್ದ ವಿಜ್ಞಾನದ ಡಿನ್‍ರಾದ ಡಾ.ವಿಜಯಕುಮಾರ ಮಲಶೆಟ್ಟಿ, ಕು.ಸ್ನೆಹಾ ಸುಮಾ ಹೆಗಡೆ, ಡಾ.ರಾಬಿಯಾ ಬೆಗಂ, ಕು.ಸಂದ್ಯಾ ಮತ್ತು ಶಿವಲಿಲಾ, ಕು.ಪ್ರಿಯಾಂಕ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯದ 94 ಉಪನ್ಯಾಸಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.