ಹವಾಮಾನ ಬದಲಾವಣೆ ಕಾರ್ಯಾಗಾರ

ಚಿತ್ರದುರ್ಗ,ಮಾ.30; ಹವಾಮಾನ ವೈಪರಿತ್ಯದಿಂದಾಗಿ ಬೆಳೆಗಳನ್ನು ಉತ್ಪನ್ನ ಮಾಡಲು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಾವೆಲ್ಲರೂ ಜಾಗೃತರಾದಾಗ ಮಾತ್ರ ಹವಾಮಾನ ವೈಪರಿತ್ಯ ತಡೆಗಟ್ಟಲು ಸಾಧ್ಯವಿದೆ ಎಂದು ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಓಂಕಾರಪ್ಪ ಸಲಹೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ   ಆಯೋಜಿಸಿದ್ದ ಹವಾಮಾನ ಬದಲಾವಣೆ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಹವಾಮಾನವನ್ನು ನಾವು ದಿನನಿತ್ಯ ಹಾಳುಮಾಡುತ್ತಿದ್ದೇವೆ. ವಾಯುಮಾಲಿನ್ಯದಿಂದ ಬರುವ ಹೊಗೆ, ಭೂಮಿಯ ದುರ್ಬಳಕೆಯಿಂದ ಹವಾಮಾನ ಬದಲಾವಣೆ ಎದುರಿಸಲಾಗುತ್ತಿದೆ. ಕೈಗಾರಿಕೀಕರಣ, ನಗರೀಕರಣ ಪರಿಸರ ಹಾಳು ಮಾಡುವುದಕ್ಕೆ ಮುಖ್ಯ ಕಾರಣವಾಗಿದೆ. ಅರಣ್ಯನಾಶವಾದರೆ ಹವಾಮಾನ ವೈಪರಿತ್ಯದಲ್ಲಿ ಸಹಜವಾಗಿ ಏರುಪೇರು ಉಂಟಾಗುತ್ತದೆ ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಸದಾಶಿವ ಮಾತನಾಡಿ, ಹವಾಮಾನವು ಒಂದೇ  ಸಮಯದಲ್ಲಿ ಸ್ಥಳದಿಂದ ಸ್ಥಳಕ್ಕೆ ಹಾಗೂ ಒಂದು ಸಮಯದಿಂದ ಸಮಯಕ್ಕೆ ವ್ಯತ್ಯಸವಾಗುತ್ತದೆ.
ನಿರ್ದಿಷ್ಟವಾದ ಸಮಯದಲ್ಲಿ ಪ್ರದೇಶದಲ್ಲಿ ಅಲ್ಪ ಸಮಯದ ವಾತಾವರಣದ ಭೌತಿಕ ಸ್ಥಿತಿಗೆ ಹವಾಮಾನ ಎಂದು ಹೇಳಬಹುದು. ದಿನದಿಂದ ದಿನಕ್ಕೂ ಮಾಸದಿಂದ ಮಾಸಕ್ಕೂ ಹಂಗಾಮಿನಿಂದ ಹಂಗಾಮಿಗೂ ವರ್ಷದಿಂದ ವರ್ಷಕ್ಕೂ ಹವಾಮಾನದಲ್ಲಿ ವೈವಿದ್ಯತೆ ಇರುತ್ತದೆ ಎಂದರು.
ಹವಾಮಾನದಲ್ಲಿ ಏರಿಳಿತಗಳು ಹಾಗೂ ಬದಲಾವಣೆಗಳು ಕೃಷಿ ಮೇಲೆ ಬಹುವಿಧದ ಪ್ರಭಾವಶಾಲಿ ಪರಿಣಾಮ ಬೀರುತ್ತದೆ. ಸರಿಯಾದ ಸಮಯಕ್ಕೆ ಮಳೆಯಾಗದಿರುವುದು, ಹೆಚ್ಚಾಗಿ ಮಳೆಯಾಗುವುದು, ಚಳಿಗಾಲದಲ್ಲಿ ಅತಿಯಾಗಿ ಚಳಿಯಾಗುವುದು, ಬೇಸಿಗೆಯಲ್ಲಿ ಹೆಚ್ಚಿನ ತಪಾಮಾನ ಉಂಟಾಗುವುದು ಮುಂತಾದ ಪ್ರತಿಕೂಲದಿಂದ ಹವಾಮಾನ ವೈಪರೀತ್ಯಕ್ಕೆ ಕಾರಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಶಶಿಧರ್, ಸಂಪನ್ಮೂಲ ವ್ಯಕ್ತಿಗಳಾದ ಗುರುದಕ್ಷಿತ್, ಮಹಾವೀರ್ ಜೈನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥತರಿದ್ದರು.