ಹವಾಮಾನ ಬದಲಾವಣೆ: ಕಾಡ್ಗಿಚ್ಚು ಪ್ರಕರಣ ಏರಿಕೆ

ನ್ಯೂಯಾರ್ಕ್,ಆ.೩೧- ಇತ್ತೀಚೆಗಿನ ವರ್ಷಗಳಲ್ಲಿ ಜಗತ್ತಿನಲ್ಲೇ ಕಾಡ್ಗಿಚ್ಚಿನ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ. ಇದೀಗ ಕ್ಯಾಲಿಫೋರ್ನಿಯಾದ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಹವಾಮಾನ ಬದಲಾವಣೆಯಿಂದ ಪರಿಣಾಮ ಜಗತ್ತಿನ ೨೫ ಪ್ರತಿಶತ ಕಾಡ್ಗಿಚ್ಚಿನ ಪ್ರಕರಣಗಳು ಸಂಭವಿಸುತ್ತಿದೆ ಎಂದು ತಿಳಿಸಿದೆ.
ಬ್ರೇಕ್‌ಥ್ರೂ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನ ವರದಿಯಲ್ಲಿ ಹಲವಾರು ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ. ಕೈಗಾರಿಕಾ ಪೂರ್ವದ ಕಾಲಕ್ಕೆ ಹೋಲಿಕೆ ಮಾಡಿದರೆ ಸದ್ಯ ಜಗತ್ತಿನಲ್ಲಿ ಸಂಭವಿಸುತ್ತಿರುವ ಕಾಡ್ಗಿಚ್ಚಿನ ಪ್ರಮಾಣವನ್ನು ೨೫ ಪ್ರತಿಶತದಷ್ಟು ಹೆಚ್ಚಿಸಿದೆ. ಜಗತ್ತಿನ ಹಲವು ಶುಷ್ಕ ಪ್ರದೇಶದಲ್ಲಿ ತಾಪಮಾನ ಪ್ರಮಾಣವು ಮಿತಿಮೀರಿ ಅವಘಡಗಳು ಸಂಭವಿಸುತ್ತಿದೆ. ಒಂದು ಕಾಲದಲ್ಲಿ ತೇವಾಂಶ ಹೊಂದಿದ್ದ ಪ್ರದೇಶದಲ್ಲಿ ಸದ್ಯ ಶುಷ್ಕತೆ ಹೊಂದುತ್ತಿದ್ದು, ಇದರಿಂದ ಅಗ್ನಿ ಅವಘಡಗಳ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಕೈಗಾರೀಕರಣದ ಬಳಿಕ ಜಾಗತಿಕ ಮಟ್ಟದಲ್ಲಿ ತಾಪಮಾನ ಪ್ರಮಾಣವು ಹೆಚ್ಚಿದ್ದು, ಶತಮಾನದ ಅಂತ್ಯದ ವೇಳೆಗೆ ಇದು ಮತ್ತಷ್ಟು ಹೆಚ್ಚುಸ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ತಿಂಗಳಲ್ಲೇ ಅಮೆರಿಕಾದ ಹವಾಯಿ ದ್ವೀಪದಲ್ಲಿ ಸಂಭವಿಸಿದ ಕಾಡ್ಗಿಚ್ಚಿನ ಪರಿಣಾಮ ೧೧೫ ಮಂದಿ ಮೃತಪಟ್ಟಿದ್ದರೆ ಕೆನಡಾದಲ್ಲಿ ೨ ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿತ್ತು. ಅದರಲ್ಲೂ ಗ್ರೀಸ್‌ನಲ್ಲಿ ಕೂಡ ಇದೇ ರೀತಿಯ ಅವಘಡ ಸಂಭವಿಸಿ ೨೦ ಮಂದಿ ಮೃತಪಟ್ಟಿದ್ದರು. ಒಂದು ಕಾಲದಲ್ಲಿ ಈ ಎಲ್ಲಾ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೇವಾಂಶ ಹೊಂದಿದ್ದು, ಆದರೆ ನಿಧಾನವಾಗಿ ಶುಷ್ಕಗೊಳ್ಳುತ್ತಾ ಸಾಗುತ್ತಿದೆ ಎನ್ನಲಾಗಿದೆ. ಇದರಿಂದ ಕಾಡ್ಗಿಚ್ಚಿನ ವಿಸ್ತರಣೆಯ ವೇಗವೂ ಹೆಚ್ಚುತಿದೆ. ೨೦೨೨ರ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ವರದಿಯಲ್ಲಿ, ?ಕಾಡ್ಗಿಚ್ಚುಗಳು ಸಾಂಪ್ರದಾಯಿಕವಾಗಿ ಅವುಗಳಿಗೆ ಒಳಗಾಗದ ಪ್ರದೇಶಗಳನ್ನು ಒಳಗೊಂಡಂತೆ ಹವಾಮಾನ ಬದಲಾವಣೆಯಿಂದ ಉಂಟಾಗುವ ಬಿಸಿಯಾದ, ಶುಷ್ಕ ಪರಿಸ್ಥಿತಿಗಳಿಂದಾಗಿ ಹೆಚ್ಚು ಸಾಮಾನ್ಯವಾಗಿದೆ ಎಂದು ಹೇಳಿದೆ.