ಹವಾಮಾನ ಇಲಾಖೆಯಿಂದ ರೆಡ್-ಆರೆಂಜ್ ಅಲರ್ಟ್ ಘೋಷಣೆ:ಸಾರ್ವಜನಿಕರು ಹಾಗೂ ರೈತರು ಮುಂಜಾಗ್ರತೆ ವಹಿಸುವಂತೆ ಸಚಿವ ಪ್ರಿಯಾಂಕ ಖರ್ಗೆ ಮತ್ತು ಡಿ.ಸಿ. ಮನವಿ

ಕಲಬುರಗಿ,ಜೂ.8: ಕಲಬುರಗಿ ಜಿಲ್ಲೆಯಲ್ಲಿ ಜೂನ್ 9 ರಿಂದ 11ರ ವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಹಾಗೂ ರೈತ ಬಾಂಧವರು ಅಗತ್ಯ ಮುಂಜಾಗ್ರತೆ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಲಬುರಗಿ ಜಿಲ್ಲಾಡಳಿಯ ಮತ್ತು ಸ್ಥಳೀಯ ಆಡಳಿತವು ಆಗಾಗ ನೀಡಲಾಗುವ ಸೂಚನೆಗಳನ್ಜು ತಪ್ಪದೆ ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.

ಮಳೆಯಿಂದ ಹಾನಿಯಾಗುವ ಸಾಧ್ಯತೆಗಳು:

ಭಾರಿ ಮಳೆಯಿಂದ ಸ್ಥಳೀಯವಾಗಿ ಇಳಿಜಾರು ಪ್ರದೇಶಗಳಲ್ಲಿ ಹೆಚ್ಚು ನೀರು ತುಂಬಿಕೂಳ್ಳುವ/ ಕೆಳ ಹಂತದ ರಸ್ತೆಗಳು ನೀರಿನಿಂದ ಮುಳುಗುವ ಸಾಧ್ಯತೆ ಇರುತ್ತದೆ, ರೈಲ್ವೆ/ರಸ್ತೆಯ ಕೆಳಸೇತುವೆ(Under pass) ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುತ್ತದೆ. ಅತೀ ಹೆಚ್ಚಿನ ಮಳೆಯಿಂದ ವಾಹನ ಸವಾರರಿಗೆ ರಸ್ತೆ ಕಾಣದೇ ಇರಬಹುದು. ರಸ್ತೆಗಳು ನೀರಿನಿಂದ ತುಂಬಿಕೊಂಡು ಕಲಬುರಗಿ ನಗರ/ಪಟ್ಟಣ ಪ್ರದೇಶದಲ್ಲಿ ವಾಹನ ದಟ್ಟಣೆಯಾಗಬಹುದು. ರಸ್ತೆಗಳು ಹಾಳಾಗುವದಲ್ಲದೆ ಅಪಾಯದಲ್ಲಿರುವ ಹಳೆ ಕಟ್ಟಡಗಳು ಕುಸಿಯುವ ಸಾಧ್ಯತೆಯಿರುತ್ತದೆ.
ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತ ಹಾಗೂ ಕೆಸರುಗದ್ದೆಯಾಗುವ ಸಾಧ್ಯತೆ ಹೆಚ್ಚು. ನದಿಯಲ್ಲಿ ಪ್ರವಾಹ ಜೊತೆಗೆ ಗುಡುಗು, ಮಿಂಚು ಸಹಿತ ಸಿಡಿಲು ಬೀಳುವ ಸಾಧ್ಯತೆ ಇರುತ್ತದೆ.

ಸಾರ್ವಜನಿಕರು ತೆಗೆದುಕೂಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳು:

ಭಾರಿ ಮಳೆಯಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ವಾಹನ ಸವಾರರು ಅತೀ ಹೆಚ್ಚು ನೀರು ಬರುವ ಪ್ರದೇಶದ ಕಡೆಗೆ ಅಥವಾ ನದಿ ದಡಗಳಲ್ಲಿ ಸಂಚರಿಸಬಾರದು. ಸಂಚಾರಿ ನಿಯಮಗಳನ್ನು ಅನುಸರಿಸುವುದು. ಹೆಚ್ಚು ನೀರು ತುಂಬಿಕೊಳ್ಳುವ, ಕೆಳ ಹಂತದ ಹಾಗೂ ಇಳಿಜಾರು ಪ್ರದೇಶದಲ್ಲಿ ವಾಸಿಸುವವರು ಸುರಕ್ಷತೆ ಸ್ಥಳಗಳಿಗೆ ಸ್ಥಳಾಂತರಗೊಳ್ಳುವುದು. ಹಳೆಯ ಕಟ್ಟಡ ಅಥವಾ ಕಚ್ಚಾ ಮನೆಗಳಲ್ಲಿ ವಾಸಿಸಬಾರದು. ಸಿಡಿಲು ಬೀಳುವ ಸಂಭವವಿರುವುದರಿಂದ ದನಕರಗಳನ್ನು ಸುರಕ್ಷಿತವಾಗಿರಿಸುವುದು ಹಾಗೂ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಬಾರದೆಂದು ಮನವಿ ಮಾಡಲಾಗಿದೆ.

ಇದಲ್ಲದೆ ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬಾರದು. ನಿರಂತರ ಮಳೆಯಿಂದ ಅಪಾಯದಲ್ಲಿರುವ ಹಳೆಯ ಮನೆ ಗೋಡೆಗಳು ಹಾಗೂ ಇತರೆ ಕಟ್ಟಡಗಳು ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಸುರಕ್ಷತೆಯ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳುವುದು.

ತೋಟಗಾರಿಕೆ ಬೆಳೆಗಳು ಹಾಗೂ ಇತರೆ ಬೆಳೆಗಳು ಹೆಚ್ಚಿನ ಮಳೆಯಿಂದ ನೀರು ನಿಂತು ಬೆಳೆ ಹಾಳಾಗುವ ಸಾಧ್ಯತೆ ಇರುತ್ತದೆ. ಬಸಿಗಾಲುವೆಗಳ ಮೂಲಕ ನೀರನ್ನು ಜಮೀನುಗಳಿಂದ ಹೊರಹಾಕಬೇಕು ಎಂದು ಸಚಿವರು ಮತ್ತು ಜಿಲ್ಲಾಧಿಕಾರಿಗಳು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.