ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆದು ಪರಿಸರ ಸಂರಕ್ಷಿಸಿ

ಹುಳಿಯಾರು, ಜೂ. ೮- ಗಿಡಗಳನ್ನು ನೆಟ್ಟು ಬೆಳೆಸುವುದು ಮಾತ್ರವೇ ಪರಿಸರ ಸಂರಕ್ಷಣೆಯಲ್ಲ, ಹವಮಾನಕ್ಕೆ ತಕ್ಕ ಬೆಳೆ ಬೆಳೆಯುವುದು ಸಹ ಪರಿಸರ ಸಂರಕ್ಷಣೆಯ ಒಂದು ಭಾಗ ಎಂದು ತಹಶೀಲ್ದಾರ್ ವಿನಾಯಕ ಸಾಗರ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕೆಜಿ ಭತ್ತ ಬೆಳೆಯಲು ೫೦೦ ರಿಂದ ೬೦೦ ಲೀಟರ್ ನೀರು ಬೇಕಾಗುತ್ತದೆ. ನಾವು ಬೆಳೆದ ಅಕ್ಕಿಯನ್ನು ಹೊರ ದೇಶಕ್ಕೆ ರಫ್ತು ಮಾಡಿದರೆ ಅಕ್ಕಿ ಬೆಲೆಗೆ ಅಕ್ಕಿ ಜೊತೆ ನೀರನ್ನು ಸಹ ರಫ್ತು ಮಾಡಿದಂತಾಗುತ್ತದೆ. ಹಾಗಾಗಿ ನಮ್ಮ ಅವಶ್ಯಕತೆಗೆ ತಕ್ಕಂತೆ ಆಹಾರ ಉತ್ಪಾದನೆ ಮಾಡಿಕೊಂಡರೆ ನೀರು ಉಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ಕೊಟ್ಟಂತಾಗುತ್ತದೆ ಎಂದರು.
ಚೀನಾದಲ್ಲಿ ಹವಮಾನಕ್ಕನುಗುಣವಾಗಿ ಬೆಳೆ ಬೆಳೆಯುವ, ಕಡಿಮೆ ನೀರು ಬಳಕೆಯ ಆಹಾರ ಪದಾರ್ಥಗಳನ್ನು ರಫ್ತು ಮಾಡುವ, ಹೆಚ್ಚು ನೀರು ಬಳಸಿ ಬೆಳೆಯುವ ಬೆಳೆಯನ್ನು ದೇಶದ ಜನರ ಅಗತ್ಯಕ್ಕೆ ತಕ್ಕಂತೆ ಮಾತ್ರ ಬೆಳೆಯುವ ಕಾನೂನು ಜಾರಿ ಇದೆ. ಇದೇ ರೀತಿ ನಮ್ಮಲ್ಲೂ ಸಹ ನಮ್ಮ ಭೂಪ್ರದೇಶಕ್ಕೆ ಅನುಗುಣವಾಗಿ ಬೆಳೆ ಬೆಳೆದರೆ ನೀರು ಉಳಿಸಿದಂತಾಗುತ್ತದೆ ಎಂದರು.
ಪ್ರಾಚಾರ್ಯ ಎಸ್. ಸಿ. ವೀರಣ್ಣ ಮಾತನಾಡಿ, ಪರಿಸರ ಇಲ್ಲದಿದ್ದರೆ ನಾವ್ಯಾರೂ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸುವ ಸಲುವಾಗಿ ಕಾಲೇಜು ಆವರಣಗಳಲ್ಲಿ ಗಿಡಮರ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳು ಇದಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಮೋಹನ್‌ಕುಮಾರ್ ಮಿರ್ಲೆ ಮಾತನಾಡಿ, ಪರಿಸರ ನಾಶದಿಂದ ವನ್ಯ ಪ್ರಾಣಿಗಳು ಹಾಗೂ ಮನುಷ್ಯನ ನಡುವೆ ಸಂಘರ್ಷ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಎಂದು ಸ್ಟೇಟಸ್‌ಗಳಲ್ಲಿ ಗಿಡ ನೆಡದೆ ಭೂಮಿ ಮೇಲೆ ಗಿಡ ನೆಟ್ಟು ಬೆಳೆಸಲು ಯುವ ಜನತೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.